ಡೈಲಿ ವಾರ್ತೆ: ಫೆ./04/2026

ಉಡುಪಿ ನಗರದಲ್ಲಿ ಸೈಬರ್ ವಂಚಕರ ಅಟ್ಟಹಾಸ: ಬಳಸದ ಕ್ರೆಡಿಟ್ ಕಾರ್ಡ್‌ನಿಂದಲೇ 2 ಲಕ್ಷ ರೂ. ಆನ್‌ಲೈನ್ ವಂಚನೆ, ಒಟಿಪಿ ದುರುಪಯೋಗ ಶಂಕೆ!

ಉಡುಪಿ: ಉಪಯೋಗಿಸದೇ ಇಟ್ಟಿದ್ದ ಕ್ರೆಡಿಟ್ ಕಾರ್ಡ್‌ನಿಂದಲೇ 2 ಲಕ್ಷ ರೂಪಾಯಿ ಮೊತ್ತವನ್ನು ಆನ್‌ಲೈನ್ ಮೂಲಕ ವಂಚಿಸಿರುವ ಘಟನೆ ಉಡುಪಿಯಲ್ಲಿ ಬೆಳಕಿಗೆ ಬಂದಿದೆ.

ಉಡುಪಿ ನಿವಾಸಿ ಸತೀಶ (41) ಅವರು ಈ ಕುರಿತು ಉಡುಪಿ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಅವರು ಕೋಟಾಕ್ ಮಹೀಂದ್ರ ಬ್ಯಾಂಕ್‌ನಲ್ಲಿ ಉಳಿತಾಯ ಖಾತೆ ಹೊಂದಿದ್ದಾರೆ. ದಿನಾಂಕ 10/11/2025ರಂದು ಮಧ್ಯಾಹ್ನ 3.08ರ ಸುಮಾರಿಗೆ ಕೋರಿಯರ್ ಮೂಲಕ ಅವರ ಹೆಸರಿನಲ್ಲಿ ಕ್ರೆಡಿಟ್ ಕಾರ್ಡ್ ಬಂದಿದ್ದು, ಅದನ್ನು ಅವರು ಉಪಯೋಗಿಸದೇ ಹಾಗೆಯೇ ಇಟ್ಟುಕೊಂಡಿದ್ದರು.

ನಂತರ ದಿನಾಂಕ 20/12/2025ರಂದು ಬ್ಯಾಂಕಿಗೆ ಭೇಟಿ ನೀಡಿದ ವೇಳೆ ಮೊಬೈಲ್ ಬ್ಯಾಂಕಿಂಗ್ ಆಪ್ ಪರಿಶೀಲಿಸಿದಾಗ ಅನುಮಾನಾಸ್ಪದ ವ್ಯವಹಾರಗಳು ಕಂಡುಬಂದಿವೆ.

ತಕ್ಷಣ ಬ್ಯಾಂಕ್ ಸಿಬ್ಬಂದಿಗೆ ಮಾಹಿತಿ ನೀಡಿದಾಗ, ಪಿರ್ಯಾದಿದಾರರ ಹೆಸರಿಗೆ ಮಂಜೂರಾಗಿದ್ದ 2 ಲಕ್ಷ ರೂಪಾಯಿ ಕ್ರೆಡಿಟ್ ಲಿಮಿಟ್ ಸಂಪೂರ್ಣವಾಗಿ ಉಪಯೋಗಿಸಿರುವುದು ತಿಳಿದುಬಂದಿದೆ.

ಕ್ರೆಡಿಟ್ ಕಾರ್ಡ್ ಸ್ಟೇಟ್‌ಮೆಂಟ್ ಪರಿಶೀಲನೆಯ ವೇಳೆ, ಕಾರ್ಡ್ ದೊರೆತ ದಿನವೇ Sectormark IT Solution ಹಾಗೂ Thane Departmental Store ಖಾತೆಗಳಿಗೆ ಒಟ್ಟು 2 ಲಕ್ಷ ರೂಪಾಯಿ ವರ್ಗಾವಣೆಯಾದುದು ದೃಢಪಟ್ಟಿದೆ.

ಪಿರ್ಯಾದಿದಾರರು ಕ್ರೆಡಿಟ್ ಕಾರ್ಡ್ ಬಳಸದಿದ್ದು, ಪಿನ್ ಕೂಡ ಜನರೇಟ್ ಮಾಡಿರಲಿಲ್ಲ. ಆದರೂ ಯಾರೋ ಅಪರಿಚಿತರು ಆನ್‌ಲೈನ್ ಮೂಲಕ ಒಟಿಪಿ ಪಡೆದು ವಂಚನೆ ನಡೆಸಿರುವ ಶಂಕೆ ವ್ಯಕ್ತವಾಗಿದೆ.

ಈ ಸಂಬಂಧ ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 24/2026 ಅಡಿಯಲ್ಲಿ ಭಾರತೀಯ ನ್ಯಾಯ ಸಂಹಿತೆ ಕಲಂ 318(4) ಹಾಗೂ ಐಟಿ ಕಾಯ್ದೆ 66(D)ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಳ್ಳಲಾಗಿದೆ.