ಡೈಲಿ ವಾರ್ತೆ: 04/April/2024
ಮತ್ತೊಬ್ಬ ಅಭ್ಯರ್ಥಿ ಡಾ. ಸಿ ಎನ್ ಮಂಜುನಾಥ್ ಡಾಕ್ಟರಲ್ಲ, ಪ್ರಮಾಣಪತ್ರವೂ ನಕಲಿ ಎಂದ ಬಿಜೆಪಿ!
ರಾಮನಗರ: ಕರ್ನಾಟಕದಲ್ಲಿ ಲೋಕಸಭಾ ಚುನಾವಣೆಯ ಕಾವು ದಿನದಿಂದ ದಿನಕ್ಕೆ ಏರುತ್ತಿದೆ. ರಾಜ್ಯದ ಮೊದಲ ಹಂತದ ಚುನಾವಣೆಗೆ ನಾಮಪತ್ರ ಸಲ್ಲಿಸಲು ಇಂದು (ಏಪ್ರಿಲ್ 4) ಕೊನೆಯ ದಿನವಾಗಿದೆ. ಈ ಹಿನ್ನೆಲೆಯಲ್ಲಿ ಕಾಂಗ್ರೆಸ್, ಬಿಜೆಪಿ-ಜೆಡಿಎಸ್ ಮೈತ್ರಿ ಅಭ್ಯರ್ಥಿಗಳು ಬುಧವಾರವೂ ನಾಮಪತ್ರ ಸಲ್ಲಿಸಿದ್ದಾರೆ. ಇಂದೂ ಸಹ ನಾಮಪತ್ರ ಸಲ್ಲಿಕೆ ಮುಂದುವರಿದಿದೆ.
ಬೆಂಗಳೂರು ಗ್ರಾಮಾಂತರ (Bಲೋಕಸಭೆ ಕ್ಷೇತ್ರದ ಬಿಜೆಪಿ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ಡಾ ಸಿ.ಎನ್ ಮಂಜುನಾಥ್ ಗುರುವಾರ ನಾಮಪತ್ರ ಸಲ್ಲಿಸಿದರು. ಈಗಾಗಲೇ ಡಾ ಸಿ.ಎನ್ ಮಂಜುನಾಥ್ ಹೆಸರನ್ನು ಹೋಲುವ ಮತ್ತೊಬ್ಬ ಅಭ್ಯರ್ಥಿ ಡಾ ಸಿ.ಎನ್ ಮಂಜುನಾಥ್ ನಾಮಪತ್ರ ಸಲ್ಲಿಸಿದ್ದಾರೆ.
ಚನ್ನರಾಯಪಟ್ಟಣ ಮೂಲದ ಡಾ ಸಿ.ಎನ್ ಮಂಜುನಾಥ್ ಇಂದು ಬಹುಜನ ಭಾರತ್ ಪಾರ್ಟಿ ಅಭ್ಯರ್ಥಿಯಾಗಿ ಉಮೇದುವಾರಿಕೆ ಸಲ್ಲಿಸಿದ್ದಾರೆ. ಆದರೆ, ಇದೀಗ ಅವರು ನಕಲಿ ವಿಶ್ವವಿದ್ಯಾಲಯದ ಸರ್ಟಿಫಿಕೇಟ್ ಸಲ್ಲಿಸಿದ್ದಾರೆ ಎಂಬ ಆರೋಪ ಕೇಳಿಬಂದಿದೆ.
ಹಾಸನ ಜಿಲ್ಲೆಯ ಚನ್ನರಾಯಪಟ್ಟಣ ತಾಲೂಕಿನ ಡಾ. ಸಿಎನ್ ಮಂಜುನಾಥ್, ಗ್ಲೋಬಲ್ ಹ್ಯೂಮನ್ ಪೀಸ್ ಯೂನಿವರ್ಸಿಟಿಯಿಂದ ಸಾಮಾಜಿಕ ಸೇವೆಗಾಗಿ ಡಾಕ್ಟರೇಟ್ ಪಡೆದುಕೊಂಡಿದ್ದಾರೆ. ಆದರೆ, ನಕಲಿ ವಿಶ್ವವಿದ್ಯಾಲಯದ ಸರ್ಟಿಫಿಕೇಟ್ ನೀಡಿದ್ದಾರೆ ಎಂದು ಬಿಜೆಪಿ ಆರೋಪಿಸಿದ್ದು, ಈ ಬಗ್ಗೆ ಚುನಾವಣಾ ಅಧಿಕಾರಿಗಳಿಗೆ ದೂರು ಸಲ್ಲಿಸಲು ಚಿಂತನೆ ನಡೆಸಿದೆ.
ಈ ಮಧ್ಯೆ, ಡಾ. ಸಿಎನ್ ಮಂಜುನಾಥ್ ಕಣಕ್ಕಿಳಿಯುತ್ತಿದ್ದಂತೆಯೇ ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಮಂಜುನಾಥ್ ಹೆಸರಿನ ಅಭ್ಯರ್ಥಿಗಳ ಸಂಖ್ಯೆ ನಾಲ್ಕಕ್ಕೆ ಏರಿಕೆಯಾಗಿದೆ. ಬಿಜೆಪಿ ಅಭ್ಯರ್ಥಿ ಮಂಜುನಾಥ್ ಹೊರತುಪಡಿಸಿ ಬಹುಜನ ಭಾರತ್ ಪಾರ್ಟಿಯ ಡಾ.ಸಿ.ಎನ್.ಮಂಜುನಾಥ್, ಪಕ್ಷೇತರರಾಗಿ ಸಿ. ಮಂಜುನಾಥ್, ಎನ್. ಮಂಜುನಾಥ್, ಕೆ.ಮಂಜುನಾಥ್ ಎಂಬವರು ನಾಮಪತ್ರ ಸಲ್ಲಿಸಿದ್ದಾರೆ.
ಏನಂದ್ರು ಡಾ. ಮಂಜುನಾಥ್?
ಇನ್ನು ಮಂಜುನಾಥ್ ಹೆಸರಿನ ಅನೇಕರು ಕಣದಲ್ಲಿರುವ ಬಗ್ಗೆ ಬಿಜೆಪಿ ಅಭ್ಯರ್ಥಿ ಡಾ. ಸಿಎನ್ ಮಂಜುನಾಥ್ ಪ್ರತಿಕ್ರಿಯಿಸಿದ್ದು, ಚುನಾವಣೆ ಸಮಯದಲ್ಲಿ ಇದೆಲ್ಲ ಸಾಮಾನ್ಯ. ಮತದಾರರು ಪ್ರಬುದ್ಧರಿದ್ದಾರೆ. ಅವರು ಯೋಚಿಸಿ ಮತ ಚಲಾಯಿಸುತ್ತಾರೆ ಎಂದು ಹೇಳಿದ್ದಾರೆ. ಕಳೆದ ಲೋಕಸಭಾ ಚುನಾವಣೆಯಲ್ಲಿ ಮಂಡ್ಯ ಕ್ಷೇತ್ರದಿಂದ ಹಲವು ಮಂದಿ ಸುಮಲತಾ ಹೆಸರಿನ ಅಭ್ಯರ್ಥಿಗಳು ಕಣಕ್ಕಿಳಿದಿದ್ದನ್ನು ಇಲ್ಲಿ ನೆನಪಿಸಿಕೊಳ್ಳಬಹುದು.