ಡೈಲಿ ವಾರ್ತೆ: 04/April/2024

ಕೇರಳ: ದೇವರ ಉತ್ಸವದಲ್ಲಿ ನೋಡ ನೋಡುತ್ತಿದ್ದಂತೆ ಮದವೇರಿ ಮಾವುತನನ್ನು ಸಾಯಿಸಿದ ಆನೆ!

ವಿಡಿಯೋ ವೀಕ್ಷಿಸಿ

ತಿರುವನಂತಪುರಂ: ಆನೆಯೊಂದು ನೋಡ ನೋಡುತ್ತಿದ್ದಂತೆ ಮಾವುತನನ್ನು ತುಳಿದು ಸಾಯಿಸಿರುವ ಘಟನೆ ಕೇರಳದ ಕೊಟ್ಟಾಯಂ ಜಿಲ್ಲೆಯ ವೈಕೋಂ ತಾಲ್ಲೂಕಿನ ಟಿವಿ ಪುರಂನಲ್ಲಿರುವ ಶ್ರೀರಾಮ ಸ್ವಾಮಿ ದೇವಸ್ಥಾನದ ವಠಾರದಲ್ಲಿ ನಡೆದಿದೆ.

ಅರವಿಂದ್ (26) ಮೃತ ಮಾವುತ.
ಆನೆ ಮಾವುತನನ್ನು ತುಳಿದು ಸಾಯಿಸುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಕುಂಜುಲಕ್ಷ್ಮೀ ಎಂಬ ಹೆಸರಿನ ಆನೆಗೆ ದೇವರ ಉತ್ಸವದ ಅಂಗವಾಗಿ ನೆಟ್ಟಿಪಟ್ಟಿಯನ್ನು ಕಟ್ಟಲಾಗುತ್ತಿತ್ತು. ಆದರೆ ನೋಡ ನೋಡುತ್ತಿದ್ದಂತೆ ಮದವೇರಿ ಮೇಲಕ್ಕೆ ಎದ್ದ ಆನೆ ಮಾವುತ ಅರವಿಂದ್ನನ್ನು ಕೆಳಗೆ ಹಾಕಿ ಹೊಸಕಿ ಹಾಕಿದೆ. ಇದನ್ನು ನೋಡಿದ ಮತ್ತೋರ್ವ ಮಾವುತ ಆನೆಯನ್ನು ಹಿಡಿತಕ್ಕೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗುತ್ತಾರೆ.
ಆದರೆ ಗಾಯಾಳುವನ್ನು ತಾಲ್ಲೂಕು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಗಂಭೀರವಾಗಿ ಗಾಯಗೊಂಡಿದ್ದ ಆತ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

ಘಟನೆ ನಡೆದ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಘಟನೆ ಸಂಬಂಧ ಪ್ರಕರಣ ದಾಖಲಾಗಿದೆ.