ಡೈಲಿ ವಾರ್ತೆ: 04/April/2024
– ಕೆ. ಸಂತೋಷ್ ಶೆಟ್ಟಿ ಮೊಳಹಳ್ಳಿ, ಕುಂದಾಪುರ.
ಸಾವನ್ನು ಗೆದ್ದ ಸಾತ್ವಿಕ್, ಫಲಿಸಿತು ಕರ್ನಾಟಕ ಜನತೆಯ ಪ್ರಾರ್ಥನೆ…, ಕ್ಯಾಮೆರಾದ ಸಹಾಯದಿಂದ ಆಮ್ಲಜನಕ ರವಾನೆ.., 20 ಗಂಟೆಗಳ ಕಾರ್ಯಾಚರಣೆ ಯಶಸ್ವಿ…!” ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಘಟನೆ…!”
ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ತೆರೆದ ಕೊಳವೆ ಬಾವಿಗೆ ಬಿದ್ದಿದ್ದ ಎರಡು ವರ್ಷದ ಪುಟ್ಟ ಕಂದಮ್ಮ ಬದುಕಿಬಂದಿದೆ. ಪೊಲೀಸ್, ಅಗ್ನಿ ಶಾಮಕ, ಎನ್ಡಿಆರ್ಎಫ್ ಮತ್ತು ಎಸ್ಡಿಆರ್ಎಫ್ ಸಿಬ್ಬಂದಿ ಸತತ 20 ಗಂಟೆಗಳ ಕಾರ್ಯಚರಣೆ ನಡೆಸಿ ಸಾತ್ವಿಕ್ನನ್ನು ಜೀವಂತವಾಗಿ ಹೊರಗೆ ತೆಗೆಯುವಲ್ಲಿ ಯಶಸ್ವಿಯಾಗಿದ್ದಾರೆ. ಹಾಗಾದರೆ, 20 ಅಡಿ ಆಳದ ಕೊಳವೆಬಾವಿಗೆ ಬಿದ್ದ ಸಾತ್ವಿಕ್‌ನನ್ನು ರಕ್ಷಿಸಿದ್ದು ನಿಜಕ್ಕೂ ಸಾಹಸ.
ವಿಜಯಪುರ, ಜಿಲ್ಲೆಯ ಇಂಡಿ ತಾಲೂಕಿನ ಲಚ್ಯಾಣ ಗ್ರಾಮದಲ್ಲಿ ಅಜ್ಜ ಕೊರೆಸಿದ ಕೊಳವೆ ಬಾವಿಗೆ ಬಿದ್ದ 2 ವರ್ಷದ ಕಂದಮ್ಮ ಸಾತ್ವಿಕ್‌ನನ್ನು ಯಶಸ್ವಿಯಾಗಿ ರಕ್ಷಿಸಲಾಗಿದೆ. ಜಿಲ್ಲಾಡಳಿತ ಅಗ್ನಿಶಾಮಕ ಹಾಗೂ ಇನ್ನಿತರ ತಂಡಗಳು ಮಗುವಿನ ರಕ್ಷಣೆಯಲ್ಲಿ ಪಾಲ್ಗೊಂಡಿದ್ದವು. ಸಾತ್ವಿಕ ರಕ್ಷಣೆಯಲ್ಲಿ ವಿಶೇಷ ತಂಡವನ್ನು ರಚಿಸಿ, ಜಿಲ್ಲಾಡಳಿತ ಎನ್ ಡಿ ಆರ್ ಎಫ್ ತಂಡವು ವಿಶೇಷವಾಗಿ ಗಮನವನ್ನು ಅರಿಸಿ ಮಗುವಿನ ರಕ್ಷಣೆಯಲ್ಲಿ ಪಾಲ್ಗೊಂಡಿದ್ದವು. ಇವರೆಲ್ಲರ ಶ್ರಮದ ಫಲವಾಗಿ ತಾಯಿಗೆ ಮಗು ಲಭಿಸಿದೆ ಜನತೆಗೆ ಸಂತಸ ಸಂಭ್ರಮಿಸಿದೆ.
ಆಪರೇಷನ್ ಸಾತ್ವಿಕ್ ರಕ್ಷಣೆ ಕಾರ್ಯಾಚರಣೆ ಹಂತ :-
ಬುಧವಾರ (ಏಪ್ರಿಲ್ 03) ಸಂಜೆ 5.30ರ ಸುಮಾರಿಗೆ ಮಗು ಕೊಳವೆಬಾವಿಗೆ ಬಿದ್ದಿದ್ದು, ಇದಾದ ಅರ್ಧ ಗಂಟೆಯಲ್ಲಿಯೇ ಕಾರ್ಯಾಚರಣೆ ಆರಂಭಿಸಿದ್ದು ಮಗುವಿನ ರಕ್ಷಣೆಯಲ್ಲಿ ಸಿಕ್ಕ ಮೊದಲ ಮುನ್ನಡೆಯಾಗಿದೆ. ಬುಧವಾರ ಸಂಜೆ 6 ಗಂಟೆಗೆ ಕಾರ್ಯಾಚರಣೆ ಆರಂಭಿಸಿದ ಸಿಬ್ಬಂದಿಯು ಸತತ ಪ್ರಯತ್ನ ಮಾಡಿತು. ರಾತ್ರಿಯೇ ಎರಡು ಹಿಟಾಚಿ, ಮೂರು ಜೆಸಿಬಿ ಯಂತ್ರಗಳ ಮೂಲಕ ಕೊಳವೆಬಾವಿಯ ಸುತ್ತ 20 ಅಡಿ ಅಗೆಯಲಾಯಿತು. ಬಳಿಕ ಕೊಳವೆ ಬಾವಿ ಸಿಕ್ಕಿತು. ಆದ್ರೆ, ಮಗುವಿನ ಹತ್ತಿರ ಹೋಗಲು ಇನ್ನಷ್ಟು ಬಂಡೆಗಳು ಅಡ್ಡಿಯಾಗಿದ್ದವು. ಅದನ್ನು ಸಹ ಸಿಬ್ಬಂದಿ ಹಿಟಾಚಿ ಮತ್ತು ಕೈಯಿಂದ ಡ್ರಿಲ್ಲಿಂಗ್ ಮಾಡಿ ತೆರವುಗೊಳಿಸಿದರು. ಆದ್ದರಿಂದ ಕೆಲವೇ ಗಂಟೆಗಳಲ್ಲಿ ಇಷ್ಟೊಂದು ಪ್ರಗತಿ ಕಂಡಿದ್ದು, ರಂಧ್ರ ಕೊರೆದು ಮಗುವಿನ ರಕ್ಷಣೆ ಮಾಡಲು ಸಾಧ್ಯವಾಯಿತು.
ಕ್ಯಾಮರಾ ಸಹಾಯದಿಂದ ಆಮ್ಲಜನಕ ರವಾನೆ:-
ಗುರುವಾರ ಬೆಳಗ್ಗೆ ಕೊಳವೆಬಾವಿಯ ಬಳಿ ಅಡ್ಡಲಾಗಿ 3 ಅಡಿ ರಂಧ್ರ ಕೊರೆದ ಸಿಬ್ಬಂದಿಯು ಕೃತಕ ಆಮ್ಲಜನಕವನ್ನು ರವಾನಿಸಿತು. ಅಷ್ಟೇ ಅಲ್ಲ, ಮಗುವಿನ ಸ್ಥತಿಗತಿಯನ್ನು ತಿಳಿಯಲು ಸಾತ್ವಿಕ್ ಬಿದ್ದಿದ್ದ ಕೊಳವೆ ಬಾವಿಯೊಳಗೆ ಕ್ಯಾಮೆರಾ ಬಿಡಲಾಗಿತ್ತು. ಆ ಕ್ಯಾಮರಾ ದೃಶ್ಯದಲ್ಲಿ ಸಾತ್ವಿಕ್ ಕಾಲುಗಳನ್ನು ಅಲುಗಾಡಿಸುವುದು ಕಂಡುಬಂದಿತ್ತು. ಇದರೊಂದಿಗೆ ಅದೃಷ್ಟವಶಾತ್ ಸಾತ್ವಿಕ್ ಜೀವಂತವಾಗಿದ್ದಾನೆ ಎನ್ನುವುದು ಎಲ್ಲರಿಗೂ ಖಾತ್ರಿಯಾಗಿತ್ತು. ಎಲ್ಲರ ಮೊಗದಲ್ಲೂ ಕೊಂಚ ನಿರಾಳ ಭಾವ ಮೂಡಿತ್ತು. ಅಲ್ಲದೇ ಮಗುವನ್ನು ಜೀವಂತವಾಗಿ ತರುತ್ತೇವೆಂದು ಎನ್ಡಿಆರ್ಎಫ್, ಎಸ್ಡಿಆರ್ಎಫ್ ಸಿಬ್ಬಂದಿ ಕುಟುಂಬಸ್ಥರಿಗೆ ಧೈರ್ಯ ಹೇಳಿ ತಮ್ಮ ಕಾರ್ಯಚರಣೆಯನ್ನು ಮತ್ತಷ್ಟು ತೀವ್ರಗೊಳಿಸಿದರು. ಬಳಿಕ ಕ್ಯಾಮೆರಾ ಮೂಲಕ ಮಾನಿಟರ್ ಮಾಡಿ, ಅಡ್ಡ ರಂಧ್ರದ ಮೂಲಕ ಆಮ್ಲಜನಕವನ್ನು ಪೂರೈಸಲಾಯ್ತು.
ಸಾತ್ವಿಕ್ ಬೋರ್‌ವೆಲ್ ಪೈಪ್ ಮಧ್ಯೆ ಸಿಲುಕಿದ್ದ. ಸಿಬ್ಬಂದಿಯು ಯಂತ್ರದ ಮೂಲಕ ರಂಧ್ರ ಕೊರೆಯಲು ಹೋದಾಗ ಅದರ ಶಬ್ದ ಕೇಳಿ ಅಳುತ್ತಿದ್ದ. ಮಗು ಅಳುತ್ತಿರುವ ಶಬ್ದ ಕೇಳಿದಾಗಲೇ ಸಿಬ್ಬಂದಿಗೆ ಧೈರ್ಯ ಬಂದಿತು. ಅಲ್ಲದೇ ನೆರೆದಿದ್ದ ಜನರಲ್ಲಿ ಕೊಂಚ ಸಂತಸ ಮನೆ ಮಾಡಿತ್ತು. ಕುಟುಂಬಸ್ಥರು ಮಗ ಬದುಕಿ ಬರುತ್ತಾನೆ ಎಂದು ಆಶಾಭಾವ ಹೊಂದಿದ್ದರು. ಇನ್ನು ಮಗುವಿನ ಹತ್ತಿರ ಹೋಗಲು ಇನ್ನಷ್ಟು ದೊಡ್ಡ-ದೊಡ್ಡ ಕಲ್ಲು-ಬಂಡೆಗಳು ಅಡ್ಡ ಬಂದಿದ್ದರಿಂದ ಕಾರ್ಯಚರಣೆಗೆ ಕೊಂಚ ವಿಳಂಬವಾಯ್ತು. ಆದರೂ ಸಿಬ್ಬಂದಿ ಮತ್ತೆ ಹಿಟಾಚಿ ಮೂಲಕ ಬಂಡೆಗಳನ್ನು ಡ್ರಿಲ್ ಮಾಡಿ ಚೂರು ಚೂರು ಮಾಡಿ ಮುಂದೆ ಸಾಗಿದರು. ಆಗ ಮಗುವಿನ ತಲೆ ಕಂಡುಬಂದಿತು. ಆದ್ರೆ, ಮಗು ದೇಹ ಪೈಪ್ಗೆ ಒರೆದುಕೊಂಡಿದ್ದರಿಂದ ಹೊರ ತೆಗೆಯಲು ಸಾಧ್ಯವಾಗಲಿಲ್ಲ. ನಂತರ ಸಿಬ್ಬಂದಿ, ಅಡ್ಡ ಇದ್ದ ಬಂಡೆ-ಕಲ್ಲುಗಳನ್ನು ಡ್ರಿಲ್ ಮೂಲಕ ತೆರವುಗೊಳಿಸಿದರು. ಹಾಗೆಯೇ ರಂಧ್ರ ಕೊರೆದರೆ ಮಗುವಿನ ಮೈಮೇಲೆ ಮಣ್ಣು, ಧೂಳು ಬೀಳುವ ಸಾಧ್ಯತೆ ಇತ್ತು. ಅಲ್ಲೂ ಚಾಣಾಕ್ಷತನ ಮೆರೆದ ಅಧಿಕಾರಿಗಳು ವ್ಯಾಕ್ಯೂಮ್ ಕ್ಲೀನರ್ ಮೂಲಕ ಧೂಳನ್ನು ಎಳೆದುಕೊಂಡರು. ಆಗ ಮಗುವನ್ನು ಇನ್ನಷ್ಟು ಸುರಕ್ಷಿತವಾಗಿ ರಕ್ಷಿಸಲು ಸಾಧ್ಯವಾಯಿತು.
ಮಗು ಬದುಕಿದೆ ಎನ್ನುವ ಸುದ್ದಿ ತಿಳಿಯುವುದಂತೆ ರಾಜ್ಯದ ರಾಜಕೀಯ ಗಣ್ಯರು, ಸಾರ್ವಜನಿಕರು, ಸಂಭ್ರಮ ಪಟ್ಟರು. ಸಾತ್ವಿಕ್ ಮರುಜನ್ಮ ಪಡೆದಿದ್ದು ಸಮಾಜಕ್ಕೆ ಸಂತಸ ಬಂದಿದೆ. ಕಾರ್ಯಾಚರಣೆ ನಡೆಸಿದಂತಹ ಎಲ್ಲ ಸಿಬ್ಬಂದಿ ವರ್ಗದವರಿಗೂ ಮುಖ್ಯಮಂತ್ರಿ ಸೇರಿದಂತೆ ಹಲವು ಗಣ್ಯರು ಧನ್ಯವಾದ ಸಮರ್ಪಿಸಿದ್ದಾರೆ.