ಡೈಲಿ ವಾರ್ತೆ: 04/April/2024
ಪಡುಬಿದ್ರಿ: ಟೈಮಿಂಗ್ ವಿಚಾರಕ್ಕೆ ವಾಗ್ವಾದ – ಹೆದ್ದಾರಿಗೆ ಅಡ್ಡವಾಗಿ ನಿಲ್ಲಿಸಿ ಬಸ್ ತಂಗುದಾಣದಲ್ಲಿ ವಿಶ್ರಾಂತಿ ಪಡೆದ ಚಾಲಕ.!
ಪಡುಬಿದ್ರಿ: ಬಸ್ ಟೈಮ್ ಕೀಪರ್ ಹಾಗೂ ಖಾಸಗಿ ಬಸ್ ಚಾಲಕನ ಮಧ್ಯೆ ಟೈಮಿಂಗ್ ವಿಚಾರಕ್ಕೆ ವಾಗ್ವಾದ ನಡೆದ ಬಳಿಕ ಬಸ್ಸನ್ನೇ ರಾಷ್ಟ್ರೀಯ ಹೆದ್ದಾರಿಗೆ ಅಡ್ಡವಾಗಿ ನಿಲ್ಲಿಸಿ ಬಸ್ ತಂಗುದಾಣದಲ್ಲಿ ‘ವಿಶ್ರಾಂತಿ’ ಪಡೆದ ವಿಚಿತ್ರ ಘಟನೆ ಗುರುವಾರ ಅಪರಾಹ್ನ ಪಡುಬಿದ್ರಿಯಲ್ಲಿ ನಡೆದಿದೆ.
ಕಾಪುವಿನ ಟೈಂ ಕೀಪರ್ ಶರತ್ ಹಾಗೂ ಖಾಸಗಿ ಬಸ್ ಚಾಲಕ ಅಜೀಜ್ ಮಧ್ಯೆ ಟೈಮಿಂಗ್ ಕುರಿತಾಗಿ ನಡೆದಿದ್ದ ವಾಗ್ವಾದ ನಡೆದಿತ್ತ. ಬಳಿಕ ಪಡುಬಿದ್ರಿ ತಲುಪಿದ ಸರ್ವಿಸ್ ಬಸ್ ಎಂಎಂಎಸ್‌ಗೆ ಟೈಂ ಕೀಪರ್ ಶರತ್ ಅಡ್ಡ ನಿಂತಾಗ ಕುಪಿತಗೊಂಡ ಚಾಲಕ ಅಜೀಜ್ ತನ್ನ ಮಾಲಕರಿಗೆ ಕರೆ ಮಾಡಿ, ಬಳಿಕ ಬಸ್ಸನ್ನೇ ಹೆದ್ದಾರಿಗೆ ಅಡ್ಡವಾಗಿ ನಿಲ್ಲಿಸಿ ಬಸ್ ತಂಗುದಾಣದಲ್ಲಿ ‘ವಿಶ್ರಾಂತಿ’ ಪಡೆದಿದ್ದಾನೆ. ಈ ಕುರಿತಾಗಿ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ದೂರು, ಪ್ರತಿದೂರುಗಳು ದಾಖಲಾಗಿವೆ.
ಸುಮಾರು 5 ನಿಮಿಷಗಳ ಕಾಲ ನಡೆದಿದ್ದ ಈ ಪ್ರಹಸನದಲ್ಲಿ ಪಡುಬಿದ್ರಿ ಪೊಲೀಸರ ಮಧ್ಯಪ್ರವೇಶದವರೆಗೂ ಉಡುಪಿ – ಮಂಗಳೂರು ಏಕಮುಖ ರಸ್ತೆಯಲ್ಲಿ ಹೆದ್ದಾರಿ ವಾಹನ ಸಂಚಾರಕ್ಕೆ ಬಹಳ ಅಡಚಣೆ ಆಗಿತ್ತು.