ಡೈಲಿ ವಾರ್ತೆ: 04/April/2024
ಪೂರ್ವ ಸೂಚನೆ ಇಲ್ಲದೆ ಮುಚ್ಚಿದ ಬೀಡಿ ಡಿಪೋ, ಕಾರ್ಮಿಕರಿಂದ ಪ್ರತಿಭಟನೆ
ಬಂಟ್ವಾಳ : ಕಾರ್ಮಿಕರಿಗೆ ಹಾಗೂ ಗುತ್ತಿಗೆದಾರರಿಗೆ ಯಾವುದೇ ಪೂರ್ವ ಸೂಚನೆ ನೀಡದೆ ಏಕಾಏಕಿ ಬಾಗಿಲು ಮುಚ್ಚಿರುವ ಫರಂಗಿಪೇಟೆಯ ಬೀಡಿ ಕಂಪೆನಿಯ ವಿರುದ್ಧ ಡಿಪೋ ಮುಂಭಾಗ ಕಾರ್ಮಿಕರು ಹಾಗೂ ಗುತ್ತಿಗೆದಾರರು ಪ್ರತಿಭಟನೆ ನಡೆಸಿದರು.
ಸೌತ್ ಕೆನರಾ ಹೋಂ ಇಂಡಸ್ಟ್ರೀಸ್ ಡಿಪೋ ಫರಂಗಿಪೇಟೆಯಲ್ಲಿ ಕಳೆದ 60 ವರ್ಷಗಳಿಂದ ಬೀಡಿ ಉದ್ದಿಮೆಯನ್ನು ನಡೆಸುತ್ತಿದ್ದು 40 ಮಂದಿ ಬೀಡಿ ಗುತ್ತಿಗೆದಾರರು ಹಾಗೂ 3 ಸಾವಿರಕ್ಕಿಂತಲೂ ಅಧಿಕ ಬೀಡಿ ಕಾರ್ಮಿಕರು ದುಡಿಯುತಿದ್ದಾರೆ. ಆದರೆ ಈ ಬೀಡಿ ಸಂಸ್ಥೆ ಯಾವುದೇ ಸೂಚನೆಯನ್ನು ನೀಡದೆ ಕಳೆದ ಏ.1ರಿಂದ ಕಂಪೆನಿಯನ್ನು ಮುಚ್ಚಿದ್ದು ಗುತ್ತಿಗೆದಾರರು ಹಾಗೂ ಕಾರ್ಮಿಕರು ಕೆಲಸ ಇಲ್ಲದೆ ಕಂಗಲಾಗಿದ್ದಾರೆ. ಈ ಬಗ್ಗೆ ಈಗಾಗಲೇ ದ.ಕ. ಜಿಲ್ಲಾ ಸಹಾಯಕ ಕಾರ್ಮಿಕ ಆಯುಕ್ತರಿಗೆ ಹಾಗೂ ಸ್ಥಳೀಯ ಜನಪ್ರತಿನಿಧಿಗಳ ಮೂಲಕ ಒತ್ತಾಯಿಸಿದರೂ ಕಂಪೆನಿ ಮಾಲೀಕರು ಹಠಮಾರಿ ಧೋರಣೆ ಅನುಸರಿಸಿದ್ದಾರೆ ಎಂದು ಪ್ರತಿಭಟನಕಾರರು ಆರೋಪಿಸಿ ಕೆಲಸವಿಲ್ಲದ ದಿನಗಳ ಪರಿಹಾರ ವೇತನ ಹಾಗೂ ಕೆಲಸವನ್ನು ಪುನರಾರಂಭಿಸಬೇಕು, ಬೀಡಿ ಮಾಲೀಕರು ಕೂಡಲೇ ಕೆಲಸವನ್ನು ಪ್ರಾರಂಭಿಸದಿದ್ದರೆ ಸಹಾಯ ಕಾರ್ಮಿಕ ಆಯುಕ್ತರು ಹಾಗೂ ಮಾಲೀಕರ ಕಚೇರಿಗಳ ಮುಂದೆ ಪ್ರತಿಭಟನೆ ಮಾಡಲು ತೀರ್ಮಾನಿಸಲಾಗಿದೆ. ಆದುದರಿಂದ ಸಂಬಂಧಪಟ್ಟ ಅಧಿಕಾರಿಗಳು ಕೂಡಲೇ ಮಧ್ಯಪ್ರವೇಶಿಸಿ ಸಮಸ್ಯೆ ಇತ್ಯರ್ಥ ಪಡಿಸಲು ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಯಿತು.
ಕಾರ್ಮಿಕ ಸಂಘಟನೆಗಳ ಮುಖಂಡರಾದ ಜೆ. ಬಾಲಕೃಷ್ಣ ಶೆಟ್ಟಿ , ಸುರೇಶ್ ಕುಮಾರ್, ಗುತ್ತಿಗೆದಾರರ ಸಂಘದ ಶಿವಪ್ಪ ಸುವರ್ಣ, ಗೋಪಾಲ ಪೂಜಾರಿ, ಲಕ್ಷ್ಮಣ್ ಶೆಟ್ಟಿ, ಕೃಷ್ಣಪ್ಪ ಸಾಲ್ಯಾನ್ ಮೊದಲಾದವರು ಸಭೆಯನ್ನುದ್ದೇಶಿಸಿ ಮಾತನಾಡಿದರು.