ಡೈಲಿ ವಾರ್ತೆ: 14/April/2024

ಇಂದು ಕರ್ನಾಟಕಕ್ಕೆ ಪ್ರಧಾನಿ ಮೋದಿ ಭೇಟಿ: NDA ಅಭ್ಯರ್ಥಿಗಳ ಪರ ಮತಯಾಚನೆ

ಬೆಂಗಳೂರು: ಲೋಕಸಭಾ ಚುನಾವಣೆ ಘೋಷಣೆಯಾದ ಬಳಿಕ ಪ್ರಧಾನಿ ನರೇಂದ್ರ ಮೋದಿ ಕಾಲಿಗೆ ಚಕ್ರ  ಕಟ್ಟಿಕೊಂಡಂತೆ ದೇಶದುದ್ದಕ್ಕೂ ಅಬ್ಬರದ ಪ್ರಚಾರ ನಡೆಸುತ್ತಿದ್ದಾರೆ.

ಪ್ರಧಾನಿ ಮೋದಿ ಇಂದು (ಏ.14) ರಾಜ್ಯಕ್ಕೆ ಆಗಮಿಸಲಿದ್ದು, ಸಂಜೆ 4.30 ರಿಂದ 5.20ರವರೆಗೆ ಮೈಸೂರಿನಲ್ಲಿ ಸಮಾವೇಶ ನಡೆಸಲಿದ್ದಾರೆ. ಆ ಮೂಲಕ ಸಿಎಂ ಸಿದ್ದರಾಮಯ್ಯ  ತವರು ಜಿಲ್ಲೆಯಲ್ಲಿ ಅಬ್ಬರದ ಪ್ರಚಾರ ಮಾಡಲಿದ್ದಾರೆ.
ಹಳೇ ಮೈಸೂರು ಭಾಗದ NDA ಅಭ್ಯರ್ಥಿಗಳ ಪರ ಮತಯಾಚಿಸಲಿದ್ದಾರೆ. ಈ ವೇಳೆ ಮಾಜಿ ಪ್ರಧಾನಿ ದೇವೇಗೌಡರು ಮೋದಿಗೆ ಸಾಥ್ ನೀಡಲಿದ್ದಾರೆ.

ಸಂಜೆ 4.30 ರಿಂದ 5.20 ರವರೆಗೆ ಮೈಸೂರಿನ ಮಹಾರಾಜ ಕಾಲೇಜು ಮೈದಾನದಲ್ಲಿ ಸಾರ್ವಜನಿಕ ಸಮಾವೇಶ ಆಯೋಜಿಸಲಾಗಿದ್ದು, ಹಳೇ ಮೈಸೂರು ಭಾಗವನ್ನೇ ಗುರಿಯಾಗಿಸಿ ಪ್ರಧಾನಿ ಮೋದಿ ಮತಯಾಚನೆ ಮಾಡಲಿದ್ದಾರೆ. ಬಳಿಕ ಮೈತ್ರಿ ಕಾರ್ಯಕರ್ತರನ್ನುದ್ದೇಶಿಸಿ ಭಾಷಣ ಮಾಡಲಿದ್ದಾರೆ.
ಇನ್ನು ಸಮಾವೇಶದಲ್ಲಿ 3 ಕ್ಷೇತ್ರಗಳಿಂದ 1 ಲಕ್ಷಕ್ಕೂ ಹೆಚ್ಚು ಜನರನ್ನ ಸೇರಿಸಲು ಪ್ಲ್ಯಾನ್ ಮಾಡಲಾಗಿದೆ.

ಮಂಗಳೂರಿನಲ್ಲಿ ಪ್ರಧಾನಿ ಮೋದಿ ಭರ್ಜರಿ ರೋಡ್ ಶೋ:
ಇನ್ನು ಮೈಸೂರಿನ ಸಮಾವೇಶದ ಬಳಿಕ ಪ್ರಧಾನಿ ಮೋದಿ ಮಂಗಳೂರಿಗೆ ತೆರಳಲಿದ್ದು, ಬಿಜೆಪಿ ಅಭ್ಯರ್ಥಿಗಳ ಪರವಾಗಿ ಅಬ್ಬರದ ರೋಡ್ ಶೋ ನಡೆಸಲಿದ್ದಾರೆ. ಸಂಜೆ 7:45 ಕ್ಕೆ ನಾರಾಯಣಗುರು ವೃತ್ತದಲ್ಲಿ ನಾರಾಯಣಗುರು ಪ್ರತಿಮೆಗೆ ಮಾಲಾರ್ಪಣೆ ಮಾಡಿ ರೋಡ್ ಶೋ ಆರಂಭಿಸಲಿದ್ದಾರೆ. ಮಹಾನಗರ ಪಾಲಿಕೆ ಮುಂಭಾಗದಿಂದ ಬಲ್ಲಾಳ ಬಾಗ್, ಎಂ.ಜಿ.ರಸ್ತೆಯಾಗಿ ಪಿವಿಎಸ್ ಸರ್ಕಲ್ ಬಳಿ ಬಲಕ್ಕೆ ತಿರುಗಿ ರಾಷ್ಟ್ರಕವಿ ಗೋವಿಂದ ಪೈ ಸರ್ಕಲ್ವರೆಗೆ ರೋಡ್ ಶೋ ಸಾಗಲಿದೆ. ರಾತ್ರಿ 8:30ರೊಳಗೆ ರೋಡ್ ಶೋ ಮುಗಿಯಲಿದೆ. ಈಗಾಗಲೇ ಮಂಗಳೂರಿನಲ್ಲಿ ಸಿದ್ಧತೆ ಮಾಡಿಕೊಳ್ಳಲಾಗಿದೆ.