ಡೈಲಿ ವಾರ್ತೆ: 16/April/2024

ಸೇತುವೆಯಿಂದ ಬಸ್‌ ಕೆಳಗೆ ಬಿದ್ದು 5 ಮಂದಿ ಮೃತ್ಯು

ಪುರಿ: ಸೋಮವಾರ ಸಂಜೆ ಒಡಿಶಾದ ಜಾಜ್‌ಪುರ ಜಿಲ್ಲೆಯಲ್ಲಿ ಕೋಲ್ಕತ್ತಾಗೆ ತೆರಳುತ್ತಿದ್ದ ಬಸ್ ಸೇತುವೆಯಿಂದ ಬಿದ್ದ ಪರಿಣಾಮ ಮಹಿಳೆ ಸೇರಿದಂತೆ ಐವರು ಸಾವನ್ನಪ್ಪಿದ್ದಾರೆ. ಹಲವರು ಗಾಯಗೊಂಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

40 ಮಂದಿ ಪ್ರಯಾಣಿಕರಿದ್ದ ಬಸ್ ಪುರಿಯಿಂದ ಕೋಲ್ಕತ್ತಾಗೆ ತೆರಳುತ್ತಿತ್ತು. ರಾಷ್ಟ್ರೀಯ ಹೆದ್ದಾರಿ-16ರ ಬಾರಾಬತಿ ಸೇತುವೆ ಮೇಲೆ ರಾತ್ರಿ 9 ಗಂಟೆ ಸುಮಾರಿಗೆ ಈ ಅಪಘಾತ ಸಂಭವಿಸಿದೆ.

ಜಜ್‌ಪುರದ ಪೊಲೀಸ್ ಅಧೀಕ್ಷಕರು, ವೈದ್ಯರ ತಂಡ ಮತ್ತು ಇತರ ಜಿಲ್ಲಾಡಳಿತ ಅಧಿಕಾರಿಗಳು ಅಪಘಾತ ಸ್ಥಳದಲ್ಲಿ ರಕ್ಷಣಾ ಕಾರ್ಯಾಚರಣೆಯ ಮೇಲ್ವಿಚಾರಣೆ ಮಾಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಗ್ಯಾಸ್ ಕಟರ್ ಬಳಸಿ ಗಾಯಾಳುಗಳನ್ನು ರಕ್ಷಿಸಿದ್ದಾರೆ.
ಅಪಘಾತದಲ್ಲಿ ಮೃತಪಟ್ಟವರ ಬಗ್ಗೆ ಮುಖ್ಯಮಂತ್ರಿ ನವೀನ್‌ ಪಟ್ನಾಯಕ್‌ ಸಂತಾಪ ಸೂಚಿಸಿದ್ದಾರೆ. ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ತಲಾ 3 ಲಕ್ಷ ರೂ. ಪರಿಹಾರ ಘೋಷಿಸಿದ್ದಾರೆ.