ಡೈಲಿ ವಾರ್ತೆ: 16/April/2024

ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಮೂಡಿಗೆರೆಯಲ್ಲಿ ಕಾಂಗ್ರೆಸ್ ಚುನಾವಣೆ ಪ್ರಚಾರ:
ಬಿಜೆಪಿಯ ವೈಫಲ್ಯವನ್ನು ಕಂಡು ಯುವ ಕಾರ್ಯಕರ್ತರು ಕಾಂಗ್ರೆಸ್ ಸೇರಿರುವುದು ಉತ್ತಮ ಬೆಳವಣಿಗೆ : ಮಾಜಿ ಶಾಸಕ ಎಂ.ಪಿ. ಕುಮಾರ ಸ್ವಾಮಿ

ಮೂಡಿಗೆರೆ: ಬಿಜೆಪಿಯ ವೈಫಲ್ಯವನ್ನು ಕಂಡು, ಯುವ ಕಾರ್ಯಕರ್ತರು ಕಾಂಗ್ರೆಸ್ ನ ಯಶಸ್ಸನ್ನು ನೋಡಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿರುವುದು ಉತ್ತಮ ಬೆಳವಣಿಗೆ ಎಂದು ಮೂಡಿಗೆರೆ ಮಾಜಿ ಶಾಸಕ ಎಂ.ಪಿ. ಕುಮಾರ ಸ್ವಾಮಿ ಹೇಳಿದರು.
ಮೂಡಿಗೆರೆಯಲ್ಲಿ ಸೋಮವಾರ ನಡೆದ ಕಾಂಗ್ರೆಸ್ ಪ್ರಚಾರದ ಸಭೆಯನ್ನುದ್ದೇಶಿಸಿ ಮಾತನಾಡಿದ ಅವರು ದೇಶದ ಭವಿಷ್ಯವನ್ನು   ಗಮನದಲ್ಲಿರಿಸಿಕೊಂಡು ಜನರು ಇಂದು ಕಾಂಗ್ರೆಸ್ ಪಕ್ಷವನ್ನು ಬೆಂಬಲಿಸಬೇಕಾದ ಅನಿವಾರ್ಯತೆ ಇದೆ.  ಬಿಜೆಪಿ ಪಕ್ಷವೂ ಅಂಬಾನಿ ಹಾಗೂ ಅದಾನಿಯನ್ನು ಶ್ರೀಮಂತರನ್ನಾಗಿ ಮಾಡಿದೆ. ದೇಶದಲ್ಲಿ ನಿರುದ್ಯೋಗ ತಾಂಡವವಾಡುತ್ತಿದೆ. ಯುವ ಜನರು ಹತಾಶರಾಗಿದ್ದಾರೆ. ಆದ್ದರಿಂದ ಪರಿಸ್ಥಿತಿ ಇನ್ನೂ ವಿಕೋಪಕ್ಕೆ ತಲಪುವ ಮೊದಲು ಜನ ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ಎಂ. ಪಿ. ಕುಮಾರ ಸ್ವಾಮಿ ಹೇಳಿದರು.

ಈ ಸಂದರ್ಭ ಮಾಜಿ ಸಚಿವೆ ಮೋಟಮ್ಮ ಅವರು ಮಾತನಾಡಿ ದೇಶದ ಜನ ಎಚ್ಚೆತ್ತುಕೊಂಡಿದ್ದಾರೆ. ಅಲ್ಲದೆ ಬದಲಾವಣೆ ಬಯಸುತ್ತಿದ್ದಾರೆ.
ಸಂಕಷ್ಟಗಳನ್ನು ಎದುರಿಸುತ್ತಿದ್ದ ಜನರಿಗೆ ಈಗ ಅರಿವಾಗಿದೆ. ಸುಳ್ಳು ಮಾರಾಟವಾಗುವುದಿಲ್ಲ ಎಂಬುದು ಬಿಜೆಪಿಗೂ ಗೊತ್ತಾಗಿದೆ. “ಕರ್ನಾಟಕದಲ್ಲಿ ಕಾಂಗ್ರೆಸ್‌ ಸರಕಾರ ನೀಡಿರುವ ಗ್ಯಾರೆಂಟಿ ಯೋಜನೆಗಳ ಬಗ್ಗೆ ಟೀಕೆ ಮಾಡುತ್ತಿರುವ ಬಿಜೆಪಿಯೇ ಈಗ ಗ್ಯಾರೆಂಟಿ ಯೋಜನೆಗಳನ್ನು ನಕಲು ಮಾಡುತ್ತಿದೆ.
ಬಿಜೆಪಿಯ ಸುಳ್ಳಿನ ಸರಕುಗಳು ಈಗ ಮಾರುಕಟ್ಟೆಯಲ್ಲಿ ಮಾರಾಟವಾಗುತ್ತಿಲ್ಲ. ಜನರು ಪ್ರಶ್ನೆ ಮಾಡಲು ಆರಂಭಿಸಿದ್ದಾರೆ. ಅಲ್ಲದೆ ಜನರು ಯೋಚಿಸಲು ಆರಂಭಿಸಿದ್ದಾರೆ ಎಂದು ಹೇಳಿದ್ದಾರೆ.
ಮೂಡಿಗೆರೆಯ ಕ್ಷೇತ್ರದ ಜನ ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ಗೆ ಉತ್ತಮ ರೀತಿಯಲ್ಲಿ ಬೆಂಬಲ ನೀಡಿದ್ದೀರಿ. ಈ ಹಿಂದೆ ಜಯಪ್ರಕಾಶ ಹೆಗ್ಡೆ ಅವರಿಗೆ ಕಾರ್ಯನಿರ್ವಹಿಸಲು ಸಿಕ್ಕಿದ್ದು ಕೇವಲ 20 ತಿಂಗಳ ಕಾಲಾವಕಾಶ, ಆದರೂ ಅವರು ಉತ್ತಮ ರೀತಿಯಲ್ಲಿ ಕಾರ್ಯನಿರ್ವಹಿಸಿದ್ದಾರೆ. ಅವರಿಗೆ ಮತ್ತೊಮ್ಮೆ ಅವಕಾಶ ನೀಡಬೇಕಾಗಿದೆ. ರಾಜ್ಯದ ಯೋಜನೆಗಳನ್ನು ತರಲಿಕ್ಕೆ ನನ್ನಿಂದಾದ ಪ್ರಯತ್ನ ಮಾಡುವೆ. ಅದೇ ರೀತಿ ಕೇಂದ್ರದಿಂದ ಯೋಜನೆಗಳನ್ನು ತರಲು ನಮಗೆ ಒಬ್ಬ ಸಮರ್ಥ ನಾಯಕರ ಅಗತ್ಯವಿದೆ. ಆ ಕಾರ್ಯವನ್ನು ಜಯಪ್ರಕಾಶ ಹೆಗ್ಡೆ ಅವರು ಸಮರ್ಥವಾಗಿ ನಿಭಾಯಿಸಬಲ್ಲರು. ಆದ್ದರಿಂದ ಹೆಗ್ಡೆ ಅವರನ್ನು ಆಯ್ಕೆ ಮಾಡಿ ನಮ್ಮ ಕ್ಷೇತ್ರವನ್ನು ಉತ್ತಮಪಡಿಸಿಕೊಳ್ಳಬೇಕು ಎಂದು ಹೇಳಿದರು.


ಉಡುಪಿ- ಚಿಕ್ಕಮಗಳೂರು ಲೋಕಸಭೆ ಕ್ಷೇತ್ರದ ಕಾಂಗ್ರೆಸ್‌ ಅಭ್ಯರ್ಥಿ ಕೆ.ಜಯಪ್ರಕಾಶ್ ಹೆಗ್ಡೆ ಮಾತನಾಡಿ ತಾನು ಸಂಸದನಾಗಿದ್ದಾಗ ಕಡೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿ ಅಗಲೀಕರಣಕ್ಕೆ ಅನುಮೋದನೆಯಾಗಿತ್ತು. ಆದರೆ 10 ವರ್ಷ ಕಳೆದರೂ ರಸ್ತೆ ಅಗಲೀಕರಣ ಮಾಡಲು ಬಿಜೆಪಿಯವರಿಗೆ ಸಾಧ್ಯವಾಗಿಲ್ಲ. ಅಲ್ಲದೇ ಹಿಂದಿನ ಸಂಸದೆ ಶೋಭಾ ಕರಂದ್ಲಾಜೆ ಅವರು ಕೇಂದ್ರ ಮಂತ್ರಿ ಕೂಡ ಆಗಿದ್ದರು. ಆದರೆ ಇಲ್ಲಿನ ಕಾಫಿ ಬೆಳಗಾರರ ಸಮಸ್ಯೆ ಅಡಕೆ ರೋಗ ನಿವಾರಣೆ ಸೇರಿದಂತೆ ರೈತರ ಹಾಗೂ ಜನರ ಸಮಸ್ಯೆ ನಿವಾರಿಸಲಿಲ್ಲ. ಪೆಟ್ರೋಲ್ ಸೇರಿದಂತೆ ಎಲ್ಲಾ ಅಗತ್ಯ ವಸ್ತುಗಳ ಬೆಲೆ ಏರಿಕೆ ಮಾಡಿ ಜನರ ನೆಮ್ಮದಿಯಿಂದ ಬದುಕದಂತೆ ಮಾಡಿದ್ದಾರೆ. ಯಾವುದೇ ಅಭಿವೃದ್ಧಿ ಹಾಗೂ ಜನಪರ ಯೋಜನೆ ರೂಪಿಸದೇ ಕೇವಲ ಮೋದಿ ಹೆಸರೇಳಿಕೊಂಡು ಪುನಃ ಮತ ಕೇಳಿದರೆ ಜನ ಬೆಂಬಲಿಸುತ್ತಾರೆಂಬ ಭ್ರಮೆಯಲ್ಲಿ ಬಿಜೆಪಿಯವರಿದ್ದಾರೆಂದು ದೂರಿದರು.