ಡೈಲಿ ವಾರ್ತೆ: 21/April/2024

ಡೈಲಿವಾರ್ತೆ
ವರದಿ: ಶಿವಾನಂದಸ್ವಾಮಿ ಆರ್.ಬಿದರಕುಂದಿ ದೊರೆ.

ಈ ವರ್ಷ ಒಳ್ಳೇದಕ್ಕಿಂತ ಕೆಟ್ಟದ್ದು ಕೇಳೋದೇ ಜಾಸ್ತಿ ಆಗ್ತೈತಿ, ಮಳೆ ಬೆಳೆಯೂ ಉತ್ತಮ ಐತಿ: ಕೊಡೆಕಲ್ ಕಾರ್ಣಿಕ ಭವಿಷ್ಯ


ವಿಜಯಪುರ (ಏ.21): ಹಲವು ಪುಣ್ಯ ಕ್ಷೇತ್ರಗಳಲ್ಲಿ ಮುಂದಾಗುವ ಘಟನೆಗಳ ಕುರಿತು ಭವಿಷ್ಯಗಳನ್ನ ನುಡಿಯಲಾಗುತ್ತೆ. ಇಂಥ ಧಾರ್ಮಿಕ ಕ್ಷೇತ್ರಗಳಲ್ಲಿ ನುಡಿಯುವ ಭವಿಷ್ಯಗಳು ವರ್ಷದೊಳಗೆ ನಿಜವಾಗುತ್ವೆ ಅನ್ನೋ ನಂಬಿಕೆಗಳು ಇವೆ. ಹಾಗೇ ಕೊಡೆಕಲ್‌ ಕ್ಷೇತ್ರದ ಬಸವೇಶ್ವರ ದೇಗುಲದಲ್ಲಿ ನುಡಿಯುವ ಕಾರ್ಣಿಕಕ್ಕೆ ತನ್ನದೆಯಾದ ಮಹತ್ವ ಇದೆ. ಈ ವರ್ಷವು ಕೊಡೆಕಲ್‌ ಬಸವೇಶ್ವರ ದೇಗುಲದಲ್ಲಿ ಕಾರ್ಣಿಕ ನುಡಿಯಲಾಗಿದ್ದು, ಅಚ್ಚರಿಯ ಭವಿಷ್ಯವನ್ನ ಹೇಳಲಾಗಿದೆ..

ಜಂಬಗಿ (ಆ)ಯ ಕೊಡೆಕಲ್‌ ಬಸವೇಶ್ವರ ಭವಿಷ್ಯ
ರಾಜ್ಯದ ಹಲವೆಡೆ ಕೊಡೆಕಲ್‌ ಬಸವೇಶ್ವರರ ದೇಗುಲಗಳಿವೆ. ಪ್ರತಿವರ್ಷವು ಈ ದೇಗುಲಗಳಲ್ಲಿ ನಡೆಯುವ ಜಾತ್ರೆಗಳಲ್ಲಿ ಮೂಲ ಕೊಡೆಕಲ್‌ ಬಸವೇಶ್ವರ ದೇಗುಲದಲ್ಲಿ ನುಡಿದ ಭವಿಷ್ಯಗಳನ್ನ ವಿಶ್ಲೇಷಣೆ ಮಾಡಲಾಗುತ್ತೆ.  ಹಾಗೇ ವಿಜಯಪುರ ಜಿಲ್ಲೆಯ ಜಂಬಗಿ (ಆಹೇರಿ) ಗ್ರಾಮದಲ್ಲಿ ಕೊಡೆಕಲ್‌ ಬಸವೇಶ್ವರರ ನುಡಿಗಳನ್ನ ಇಲ್ಲಿನ ದೇಗುಲ ಮುಖ್ಯ ಗುರುಗಳು ಶಿವಶಂಕರ್‌ ದಿಂಡವಾರ್‌ ವಿಶ್ಲೇಷಣೆ ಮಾಡಿದ್ದಾರೆ. 2024 ಜಾತ್ರೆ ಪ್ರಯುಕ್ತ ಪುರಾಣ ಮುಕ್ತಾಯ. ಗ್ರಂಥ ಬಿಡುಗಡೆ ಹಾಗೂ ಈ ವರ್ಷದ ಭವಿಷ್ಯ ನುಡಿಗಳ ಕಾರ್ಯಕ್ರಮ ಸಹ ನಡೆಯಿತು.

ರಾಜ್ಯದಲ್ಲಿ ಮಳೆ ಬೆಳೆ ಸಂಪನ್ನ: ಕೊಡೆಕಲ್‌ ಭವಿಷ್ಯ:
ರಾಜ್ಯದಲ್ಲಿ ಬರ ತಾಂಡವದ ನಡುವೆ ಕೊಡೆಕಲ್‌ ಬಸವೇಶ್ವರರ ಕಾರ್ಣಿಕ ಜನರಲ್ಲಿ ಕೊಂಚ ನೆಮ್ಮದಿಯನ್ನ ಮೂಡಿಸಿದೆ 2024ರಲ್ಲಿ ರಾಜ್ಯದಲ್ಲಿ ಉತ್ತಮ ಮಳೆಯಾಗಲಿದೆ. ದಕ್ಷಿಣ ಭಾಗದಲ್ಲಿ ಕೊಂಚ ಹೆಚ್ಚಾಗಿಯೇ ಮಳೆ ಸಂಭವ ಇದೆ ಎಂದು ಕಾರ್ಣಿಕ ನುಡಿಯಲಾಗಿದೆ. ಇನ್ನು ಮಳೆಯ ಜೊತೆ ಜೊತೆಗೆ ಗಾಳಿಯ ಆರ್ಭಟವು ಇರಲಿದೆ. ವಾತಾವರಣದಲ್ಲಿ ವ್ಯತ್ಯಾಸ ಉಂಟಾಗಲಿದೆ ಎಂದಿದ್ದಾರೆ. ಈ ವರ್ಷ ಮಳೆಯ ಜೊತೆಗೆ ವಾಯು ಆರ್ಭಟಿಸಲಿದ್ದಾನೆ ಎಂದು ಕಾರ್ಣಿಕದಲ್ಲಿ ಹೇಳಲಾಗಿದೆ.

ಇನ್ನು ದೇಶದ ಸ್ಥಿತಿಗತಿಯ ಬಗ್ಗೆಯೂ ಇಲ್ಲಿ ಭವಿಷ್ಯ ನುಡಿಯಲಾಗಿದ್ದು, ದೇಶದಲ್ಲಿ ಯಥಾಸ್ಥಿತುಯವಾಗಿ ಅಭಿವೃದ್ಧಿ ಕಾರ್ಯಗಳು ನಡೆಯುತ್ತವೆ ಎಂದು ಹೇಳಲಾಗಿದೆ. ವಿಶ್ವದಲ್ಲಿ ಭಾರತದ ವಿಜಯ ಪತಾಕೆ ಹಾರಲಿದೆ. ದೇಶ ಜಗತ್ತಿನಲ್ಲಿ ಉತ್ತಮ ಹೆಸರು ಮಾಡಲಿದೆ ಎಂದಿದ್ದಾರೆ. 

ಒಳ್ಳೆಯದ್ದಕ್ಕಿಂತ ಕೆಟ್ಟದ್ದೇ ಕೇಳುವುದು:
ಇನ್ನೂ ಮುಂದುವರಿದು ಜಗತ್ತಿನಲ್ಲಿ ಒಳ್ಳೆಯದಕ್ಕಿಂತ ಕೆಟ್ಟದ್ದೆ ಕೇಳುವುದು ಬಹಳ ಆಗುತ್ತದೆ ಎಂದು ಭವಿಷ್ಯ ನುಡಿಯಲಾಗಿದೆ. ಈ ಮೂಲಕ ಹೊರ ದೇಶಗಳಲ್ಲಿ ಯುದ್ಧದ ಆತಂಕ, ಅನಾಹುತಗಳು ಮುಂದುವರೆಯುವ ಸೂಚನೆಯನ್ನು ನೀಡಲಾಗಿದೆ. ಸುತ್ತಲಿನ ರಾಷ್ಟ್ರಗಳ ವಿಷಯ ಕೇಳಿ ಭಯವಾಗುತ್ತದೆ ಎನ್ನುವ ಮೂಲಕ ನೆರೆ ರಾಷ್ಟ್ರಗಳಲ್ಲಿ ಅಹಿತಕರ ಘಟನೆಗಳು ಸಂಭವಿಸಲಿವೆ ಎನ್ನಲಾಗಿದೆ. ನಮ್ಮ ರಾಷ್ಟ್ರಕ್ಕೆ ಯಾವುದೇ ಹಾನಿಕರ ಇಲ್ಲ, ಮಹಿಳೆಯರಿಗೆ ಹೆಚ್ಚಿನ ಸ್ಥಾನ ಸಿಗುವ ಸಾಧ್ಯತೆಗಳು ಇರುತ್ತವೆ ಎನ್ನುವ ಮೂಲಕ ದೇಶದಲ್ಲಿ ಸುಭಿಕ್ಷೆಯ ಸೂಚನೆಗಳನ್ನು ಶಿವಶಂಕರ್ ದಿಂಡವಾರ್ ಅವರು ತಮ್ಮ ಕಾರ್ಣಿಕದಲ್ಲಿ ಹೇಳಿದ್ದಾರೆ.

ಇನ್ನು ದೇಗುಲದಲ್ಲಿ ಪಲ್ಲಕ್ಕಿ ಉತ್ಸವಕ್ಕೆ ಹಾಗೂ ದೇವಾಲಯದ ಆವರಣದಲ್ಲಿ ಮಾದಲಿ ಮಜಾರಕ್ಕೆ ಹುಸೇನಸಾಬ್ ಮುಲ್ಲಾ ಪಾತೆ ಕೊಡುವುದರ ಮೂಲಕ ಜಾತ್ರೆಗೆ ಚಾಲನೆ ನೀಡಿದರು. ಕೊಡೆಕಲ್ ಶ್ರೀ ಬಸವೇಶ್ವರ ದೇವಾಲಯ ದಿಂದ ವಿವಿಧ ವಾದ್ಯ ಮೇಳದೊಂದಿಗೆ ಕೊಡೆಕಲ್ ಬಸವೇಶ್ವರರ ವಚನ ಓದುತ್ತಾ ಅದ್ದೂರಿಯಾಗಿ ಪಲ್ಲಕ್ಕಿ ಉತ್ಸವ ನಡೆಯಿತು.