ಡೈಲಿ ವಾರ್ತೆ: 20/April/2024
ಉಡುಪಿ-ಚಿಕ್ಕಮಗಳೂರು ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಜಯಪ್ರಕಾಶ್ ಹೆಗ್ಡೆಗೆ 2000 ರೂ. ಕೊಟ್ಟು ಶುಭ ಹಾರೈಸಿದ ಗೃಹಲಕ್ಷ್ಮೀ
ಜಯಪುರ: ಈ ಜಗತ್ತಿನಲ್ಲಿ ಕೊನೆಯ ತನಕ ಉಳಿದುಕೊಳ್ಳುವುದು “ಪ್ರೀತಿ ಮತ್ತು ವಿಶ್ವಾಸ”. ಈ ಜಗತ್ತು ನಡೆಯುತ್ತಿರುವುದೇ ಪ್ರೀತಿ ವಿಶ್ವಾಸದ ಮೇಲೆ. ಶೃಂಗೇರಿ ತಾಲೂಕಿನ ಜಯಪುರದಲ್ಲಿ ನಡೆದ ಕಾಂಗ್ರೆಸ್ ಚುನಾವಣಾ ಪ್ರಚಾರದ ವೇಳೆ ರಾಜಕೀಯ ಪಕ್ಷವೊಂದು ಜನರ ಪ್ರೀತಿ ವಿಶ್ವಾಸಕ್ಕೆ ಯಾವ ಸಾಕ್ಷಿಯಾಗಿದೆ. ಅದಕ್ಕೆ ಜನರು ಯಾವ ರೀತಿಯಲ್ಲಿ ಪ್ರತಿಕ್ರಿಯೆ ನೀಡುತ್ತಿದ್ದಾರೆ ಎಂಬುದು ಸ್ಪಷ್ಟವಾಯಿತು.
ಜಯಪುರದ ಸಭೆಯಲ್ಲಿ ಖ್ಯಾತ ಚಿಂತಕ ಸುಧೀರ್ ಕುಮಾರ್ ಮುರೋಳಿ ಅವರು ಭಾಷಣಕ್ಕೆ ಪೂರ್ಣವಿರಾಮ ಹಾಕುವುದಕ್ಕೆ ಮುನ್ನ ಗುಲಾಬಿ ಎಂಬುವರು ಸಭೆಯ ಮುಂಭಾಗಕ್ಕೆ ಬಂದು
ತಮಗೆ ಸಿಕ್ಕ ಗೃಹಲಕ್ಷ್ಮೀ ಯೋಜನೆಯ ಒಂದು ತಿಂಗಳ ಮೊತ್ತವನ್ನು ಜಯಪ್ರಕಾಶ್ ಹೆಗ್ಡೆ ಅವರ ಚುನಾವಣಾ ವೆಚ್ಚಕ್ಕೆ ನೀಡಿದಾಗ ಜಯಪುರದಲ್ಲಿ ನೆರೆದ ಜನರಲ್ಲಿ ಸಂಭ್ರಮ ಮನೆ ಮಾಡಿತ್ತು.
ಜನರ ನಡುವೆ ಇದ್ದು ಜನರ ಕಷ್ಟವನ್ನು ಅರ್ಥ ಮಾಡಿಕೊಂಡಾಗ ಮಾತ್ರ ಉತ್ತಮ ಯೋಜನೆಯೊಂದು ರೂಪುಗೊಂಡು ಜಾರಿಗೆ ಬರಲು ಸಾಧ್ಯ. ಗುಲಾಬಿ ಅವರು ಕೊಟ್ಟ ಹಣವನ್ನು ಜಯಪ್ರಕಾಶ್ ಹೆಗ್ಡೆ ಅವರು ಕಣ್ಣಿಗೆ ಒತ್ತಿ ಕಿಸೆಗೆ ಹಾಕಿಕೊಂಡರು. ಮಾತ್ರವಲ್ಲ ಆ ಹಣಕ್ಕೆ ಪ್ರತಿಯಾಗಿ ಅವರ ಕುಟುಂಬಕ್ಕೆ ಅಗತ್ಯ ಇರುವ ನೆರವನ್ನು ಮುಂದಿನ ದಿನಗಳಲ್ಲಿ ನೀಡುವುದಾಗಿ ಭರವಸೆಯನ್ನಿತ್ತರು.
ಎರಡು ವಾರಗಳ ಹಿಂದೆ ಜಯಪ್ರಕಾಶ್ ಹೆಗ್ಡೆಯವರು ಮುತ್ತಿನ ಕೊಪ್ಪದಲ್ಲಿ ಚುನಾವಣಾ ಪ್ರಚಾರ ಮಾಡುತ್ತಿರುವಾಗಲೂ ಇಂಥದೇ ಒಂದು ಘಟನೆ ನಡೆದಿತ್ತು. ಬಾರ್ಕೂರು ಮೂಲದ ಮಹಿಳೆಯ ಪತಿ ಮಣಿಪಾಲದ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯದ ಬಿಡುಗಡೆ ಆಗುವಾಗ ಬಿಲ್ ನೋಡಿ ಅವರಿಗೆ ಆಘಾತವಾಯಿತು. ಬಡ ಕುಟುಂಬದಿಂದ ಮಹಿಳೆಗೆ ಏನು ಮಾಡಬೇಕೆಂದು ತೋಚಲಿಲ್ಲ. ಆಗ ಪಕ್ಕದ ಬೆಡ್ ನಲ್ಲಿದ್ದ ಎನ್.ಆರ್.ಪುರದ ಮುತ್ತಿನಕೊಪ್ಪದ ವ್ಯಕ್ತಿಯೊಬ್ಬರು ಮಹಿಳೆ ಏನೋ ಕಷ್ಟದಲ್ಲಿದ್ದಾರೆಂದು ಅರಿತು ವಿಚಾರಿಸಿದರು. ಆಗ ಬಿಲ್ ಕಟ್ಟಲು ಹಣ ಇಲ್ಲದಿರುವುದು ಗೊತ್ತಾಯಿತು. ಕೂಡಲೇ ಆ ವ್ಯಕ್ತಿ ಜಯಪ್ರಕಾಶ್ ಹೆಗ್ಡೆ ಅವರಿಗೆ ಕರೆ ಮಾಡಿ ವಿಷಯ ತಿಳಿಸಿದರು. ಹೆಗ್ಡೆಯವರು ಆಸ್ಪತ್ರೆಯ ಅಧಿಕಾರಿಗಳು ಮತ್ತು ವೈದ್ಯರೊಂದಿಗೆ ಮಾತನಾಡಿ ಮೊತ್ತದಲ್ಲಿ ಸಾಕಷ್ಟು ಕಡಿತ ಮಾಡಿಸಿದರು. ಈ ಉಪಕಾರವನ್ನು ಸ್ಮರಿಸಿದ ಬಾರ್ಕೂರಿನ ಆ ಮಹಿಳೆ ಕೆಲವು ದಿನಗಳ ಬಳಿಕ ಗೃಹಲಕ್ಷ್ಮೀ ಹಣದಲ್ಲಿನ ಒಂದು ಸಾವಿರವನ್ನು ಆಸ್ಪತ್ರೆಯಲ್ಲಿ ಭೇಟಿಯಾದ ಮುತ್ತಿನಕೊಪ್ಪದ ವ್ಯಕ್ತಿಗೆ ಕಳುಹಿಸಿ, ಅದನ್ನು ಜಯಪ್ರಕಾಶ್ ಹೆಗ್ಡೆ ಅವರಿಗೆ ನೀಡುವಂತೆ ವಿನಂತಿಸಿಕೊಂಡಿದ್ದರು. ಮುತ್ತಿನಕೊಪ್ಪದಲ್ಲಿ ಪ್ರಚಾರ ಸಭೆಯಲ್ಲಿದ್ದಾಗ ಜಯಪ್ರಕಾಶ್ ಹೆಗ್ಡೆ ಅವರಿಗೆ ಆ ನೆರವು ಕೈ ಸೇರಿತ್ತು.
ಈ ಎರಡೂ ಘಟನೆಗಳನ್ನು ಗಮಸಿದಾಗ ಮೊತ್ತ ಚಿಕ್ಕದೆಂದು ಕೆಲವರಿಗೆ ಅನಿಸಬಹುದು. ಆದರೆ ಇಲ್ಲಿ ಬೆಲೆಕಟ್ಟಲಾಗದ ಮಾನವೀಯ ಮೌಲ್ಯವಿದೆ. ಒಬ್ಬ ಜನಪ್ರತಿನಿಧಿಗೆ ಜನರ ಬಗ್ಗೆ ಇರುವ ಕಾಳಜಿ, ಒಬ್ಬ ಸಾಮಾನ್ಯ ಪ್ರಜೆಗೆ ಇರುವ ಉಪಕಾರ ಸ್ಮರಣೆಯು ವ್ಯಕ್ತವಾಗುತ್ತದೆ.
ಹಸಿದವರಿಗೆ ಕೊಡುವ ತುತ್ತು ಅನ್ನ, ಕತ್ತಲನ್ನು ದೂರ ಮಾಡುವ ಬೆಳಕು, ಆಶ್ರಯಕ್ಕೊಂದು ಮನೆ….ಇವೇ ನೆಮ್ಮದಿ ಕೊಡುವ ಆಸ್ತಿ… ಕುಂಟನ ನಡಿಗೆ ಕೆಲವರಿಗೆ ವ್ಯಂಗ್ಯ ಕೆಲವರಿಗೆ ವೇದನೆ…
ಉದುರಿಬಿದ್ದ ನವಿಲುಗರಿ ಮರಿ ಹಾಕುವುದಿಲ್ಲ ಎಂಬ ಕಾಮನ್ ಸೆನ್ಸ್ ಎಲ್ಲರಿಗೂ ಗೊತ್ತಿದೆ, ಆದರೆ ಅದರ ಬಣ್ಣಗಳು ಕನಿಷ್ಠ ಖುಷಿಯನ್ನಾದರೂ ಕೊಡುತ್ತವೆ. ಸರಕಾರದ ಯೋಜನೆಗಳು ಬಡವರ ಮನೆ ಬೆಳಗಿ, ಮನತುಂಬಿ… ಬದುಕಿನ ಹಾದಿಯಲಿ ಸ್ಮರಿಸಿದರೆ ಅದಕ್ಕಿಂತ ದೊಡ್ಡ ಧನ್ಯತಾಭಾವ ಯಾವುದಿದೆ?