ಡೈಲಿ ವಾರ್ತೆ: 24/April/2024

ಲೋಕಸಭೆ ಚುನಾವಣೆ 2024ರ 14 ಕ್ಷೇತ್ರಗಳಲ್ಲಿ ಬಹಿರಂಗ ಪ್ರಚಾರಕ್ಕೆ ಇಂದು ತೆರೆ

ಬೆಂಗಳೂರು: ರಾಜ್ಯದಲ್ಲಿ ಮೊದಲ ಹಂತದಲ್ಲಿ ಏ. 26 ರಂದು ಮತದಾನ ನಡೆಯುವ 14 ಲೋಕಸಭಾ ಕ್ಷೇತ್ರಗಳಲ್ಲಿ ಬಹಿರಂಗ ಪ್ರಚಾರಕ್ಕೆ ಬುಧವಾರ ಸಂಜೆ ತೆರೆ ಬೀಳಲಿದೆ. ವ್ಯಾಪಕವಾಗಿ ನಡೆಸಿದ ಬಹಿರಂಗ ಸಭೆಗಳು, ಪಾದಯಾತ್ರೆಗಳ ಮೂಲಕ ಮತದಾರರ ಮನ ಗೆಲ್ಲಲು ಈ ಕ್ಷೇತ್ರಗಳ ಅಭ್ಯರ್ಥಿಗಳು ಸಜ್ಜಾಗಿದ್ದಾರೆ.

ಈ 14 ಕ್ಷೇತ್ರಗಳಲ್ಲಿ ಮಾರ್ಚ್ 28ರಿಂದ ನಾಮಪತ್ರ ಸಲ್ಲಿಕೆ ಆರಂಭವಾಗಿತ್ತು. ಅದಕ್ಕೂ ಮೊದಲೇ ಚುನಾವಣಾ ಪ್ರಚಾರ ಬಿರುಸಾಗಿತ್ತು. 11 ಕ್ಷೇತ್ರಗಳಲ್ಲಿ ಕಾಂಗ್ರೆಸ್‌-ಬಿಜೆಪಿ ನೇರ ಹಣಾಹಣಿ ನಡೆಸುತ್ತಿದ್ದರೆ, ಮೂರು ಕ್ಷೇತ್ರಗಳಲ್ಲಿ ಕಾಂಗ್ರೆಸ್‌-ಜೆಡಿಎಸ್ ಮಧ್ಯೆ ಸ್ಪರ್ಧೆ ಇದೆ. ಬಿಜೆಪಿ, ಕಾಂಗ್ರೆಸ್‌ನ ಕೇಂದ್ರ, ರಾಜ್ಯಗಳ ಘಟಾನುಘಟಿ ನಾಯಕರು ಹಲವು ಸುತ್ತಿನ ಪ್ರಚಾರ ನಡೆಸಿದ್ದಾರೆ. ಜೆಡಿಎಸ್ ನಾಯಕರೂ ಒಕ್ಕಲಿಗ ಮತದಾರರ ಪ್ರಾಬಲ್ಯ ಇರುವ ಕ್ಷೇತ್ರಗಳಲ್ಲಿ ಎಡೆಬಿಡದೆ ಪ್ರಚಾರ ಮಾಡಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ ಮೈಸೂರು, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರಿನಲ್ಲಿ ಬಹಿರಂಗ ಸಭೆಯ ಮೂಲಕ ಬಿಜೆಪಿ, ಜೆಡಿಎಸ್ ಅಭ್ಯರ್ಥಿಗಳ ಪರ ಮತ ಯಾಚಿಸಿದ್ದಾರೆ. ಮಂಗಳೂರಿನಲ್ಲಿ ರೋಡ್ ಶೋ ನಡೆಸಿ ಕರಾವಳಿಯ ಕ್ಷೇತ್ರಗಳಲ್ಲಿ ಬಿಜೆಪಿ ಅಭ್ಯರ್ಥಿಗಳ ಪರ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡಿದ್ದಾರೆ.

ಕೇಂದ್ರ ಗೃಹ ಸಚಿವ ಅಮಿತ್ ಶಾ ಬೆಂಗಳೂರಿನಲ್ಲಿ ಸರಣಿ ಸಭೆಗಳ ಮೂಲಕ ಪಕ್ಷದ ಕಾರ್ಯಕರ್ತರನ್ನು ಹುರಿದುಂಬಿಸುವ ಜತೆಯಲ್ಲೇ, ಬಹಿರಂಗ ಸಭೆಯಲ್ಲೂ ಮತ ಯಾಚಿಸಿದ್ದರು.

ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾ‌ರ್, ಬಿಜೆಪಿ ಸಂಸದೀಯ ಮಂಡಳಿ ಸದಸ್ಯ ಬಿ.ಎಸ್‌. ಯಡಿಯೂರಪ್ಪ, ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ, ಜೆಡಿಎಸ್ ರಾಜ್ಯ ಘಟಕದ ಅಧ್ಯಕ್ಷ ಎಚ್‌.ಡಿ. ಕುಮಾರಸ್ವಾಮಿ ತಾವೇ ಅಭ್ಯರ್ಥಿಯಾಗಿರುವ ಮಂಡ್ಯ ಕ್ಷೇತ್ರದ ಜತೆ ಇತರೆಡೆಗೂ ಪ್ರಚಾರ ನಡೆಸಿದ್ದಾರೆ.

ಬುಧವಾರ ಸಂಜೆ ಬಹಿರಂಗ ಪ್ರಚಾರ ಅಂತ್ಯಗೊಳ್ಳಲಿದೆ. ಗುರುವಾರ ಮನೆ, ಮನೆ ಪ್ರಚಾರಕ್ಕೆ ಮಾತ್ರ ಅವಕಾಶವಿದೆ. ಕೊನೆಯ ದಿನದ ಬಹಿರಂಗ ಪ್ರಚಾರದ ಅವಕಾಶ ಬಳಸಿಕೊಳ್ಳಲು ಅಭ್ಯರ್ಥಿಗಳು, ಅವರ ಬೆಂಬಲಿಗರು ತರಹೇವಾರಿ ಪ್ರಯತ್ನಗಳನ್ನು ಆರಂಭಿಸಿದ್ದಾರೆ.

ಎರಡನೇ ಹಂತದಲ್ಲಿ ಪ್ರಚಾರ ಬಿರುಸು:
ಎರಡನೇ ಹಂತದಲ್ಲಿ ಮತದಾನ ನಡೆಯಲಿರುವ ರಾಜ್ಯದ 14 ಲೋಕಸಭಾ ಕ್ಷೇತ್ರಗಳಲ್ಲಿ ಸೋಮವಾರ ಚುನಾವಣಾ ಕಣ ಅಂತಿಮಗೊಂಡಿತ್ತು. ಮಂಗಳವಾರದಿಂದ ಪ್ರಚಾರ ಬಿರುಸು ಪಡೆದಿದೆ.
ಬಿಜೆಪಿ, ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳ ಘಟಾನುಘಟಿ ನಾಯಕರು ಶುಕ್ರವಾರದಿಂದ ಎರಡನೇ ಹಂತದ ಕ್ಷೇತ್ರಗಳಲ್ಲಿ ಪ್ರಚಾರಕ್ಕೆ ಸಜ್ಜಾಗಿದ್ದಾರೆ.