ಡೈಲಿ ವಾರ್ತೆ: 07/ಮೇ /2024

ಬ್ರಹ್ಮಾವರ: ತೋಟದಲ್ಲಿ ಹುಲ್ಲು ಕಟಾವು ಮಾಡುತ್ತಿದ್ದ ವ್ಯಕ್ತಿ ಮೇಲೆ ಚಿರತೆ ದಾಳಿ – ಆಸ್ಪತ್ರೆಗೆ ದಾಖಲು

    ಕೋಟ:ಬ್ರಹ್ಮಾವರ ತಾಲೂಕಿನ ಶಿರೂರು ಮೂರ್ಕೈ ಸಮೀಪ  ಹೆಗ್ಗುಂಜೆ ಗುಡ್ಡೆಯಲ್ಲಿ ತೋಟದ ಹುಲ್ಲು ಕಟಾವು ಮಾಡುತ್ತಿದ್ದ ವೇಳೆ ಚಿರತೆ ದಾಳಿ ಮಾಡಿ ಗಂಭೀರ ಗಾಯಗೊಂಡ ವ್ಯಕ್ತಿಯನ್ನು ಆಸ್ಪತ್ರೆಗೆ ದಾಖಲು ಮಾಡಿದ ಘಟನೆ ಸೋಮವಾರ ನಡೆದಿದೆ.

    ಚಿರತೆ ದಾಳಿಗೊಳಗಾದ ವ್ಯಕ್ತಿ ಸ್ಥಳೀಯ ಕೃಷ್ಣ ನಾಯ್ಕ್ ಎಂದು ತಿಳಿದು ಬಂದಿದೆ.

    ಶಿರೂರು ಮೂರ್ಕೈ ಸಮೀಪವಿರುವ ವಿಖ್ಯಾತ್‌ ಕುಮಾರ್‌ ಶೆಟ್ಟಿ ಅವರ ಡೈರಿ ಫಾರ್ಮ್ ನಲ್ಲಿ ಕೆಲಸ ನಿರ್ವಹಿಸುತ್ತಿದ್ದ ಕೃಷ್ಣ ನಾಯ್ಕ್ ದನ ಕರುಗಳಿಗೆ  ಹುಲ್ಲು ತರಲು ತೋಟಕ್ಕೆ ತೆರಳಿದ್ದರು. ಆಗ  ಹಠಾತ್ತನೆ ಚಿರತೆ ದಾಳಿ ನಡೆಸಿತ್ತು. ಗಂಭೀರವಾಗಿ ಗಾಯಗೊಂಡ ಅವರನ್ನು ಬ್ರಹ್ಮಾವರ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.