ಡೈಲಿ ವಾರ್ತೆ: 13/ಮೇ /2024

ವಿಜಯಪುರ: ಒಂಟೆ ಸವಾರಿ ಬಳಿಕ ಕಾಣೆಯಾಗಿದ್ದ ಮೂವರು ಮಕ್ಕಳು ಶವವಾಗಿ ಪತ್ತೆ!

ವಿಜಯಪುರ: ವಿಜಯಪುರದ ಚಾಬಕಸಾಬ್ ದರ್ಗಾದ ಬಳಿ ನಿನ್ನೆ ಒಂಟೆ ಸವಾರಿ ಮಾಡಿದ್ದ ಮೂವರು ಮಕ್ಕಳು ನಂತರ ಕಾಣೆಯಾಗಿದ್ದರು. ಆದರೆ ಇಂದು ಮೂವರು ಮಕ್ಕಳು ಶವವಾಗಿ ಪತ್ತೆಯಾಗಿದ್ದಾರೆ.

ವಿಜಯನಗರದ ಇಂಡಿ ರಸ್ತೆಯಲ್ಲಿರುವ ಯುಜಿಡಿ ತ್ಯಾಜ್ಯದ ನೀರಿನ ಸಂಸ್ಕರಣಾ ಘಟಕದಲ್ಲಿ ಶವಗಳು ಪತ್ತೆಯಾಗಿದ್ದು ಮೃತರನ್ನು ಗದಗ ಮೂಲದ 9 ವರ್ಷದ ಅನುಷ್ಕಾ ಅನಿಲ ದಹಿಂಡೆ 7 ವರ್ಷದ ವಿಜಯ ಅನಿಳ ದಹಿಂಡೆ ಮತ್ತು ವಿಜಯಪುರ ಮೂಲದ 7 ವರ್ಷದ ಮಿಹಿರ್ ಶ್ರೀಕಾಂತ ಜಾನಗೌಳಿ ಎಂದು ಗುರುತಿಸಲಾಗಿದೆ.

ಬೇಸಿಗೆ ರಜೆಗಾಗಿ ಗದಗ ಮೂಲದ ಅನುಷ್ಕಾ ಮತ್ತು ವಿಜಯ ವಿಜಯಪುರದಲ್ಲಿರುವ ಮಾವನ ಮನೆಗೆ ಬಂದಿದ್ದರು. ನಿನ್ನೆ ಬೆಳಿಗ್ಗೆ 10 ಗಂಟೆ ಸುಮಾರಿಗೆ ವಿಜಯಪುರದ ಚಾಬಕಸಾಬ್ ದರ್ಗಾದ ಬಳಿಯ ಮನೆಯ ಮುಂದೆ ಒಂಟೆ ಸವಾರಿ ಮಾಡಿದ್ದಾರೆ. ನಂತರ ಮಕ್ಕಳು ಕಾಣೆಯಾಗಿದ್ದರು.
ಇನ್ನು ಮಕ್ಕಳು ಒಂಟೆಗಳನ್ನು ಹುಡುಕಿಕೊಂಡು ಮನೆಯಿಂದ ಹೋಗಿದ್ದರು ಎನ್ನಲಾಗುತ್ತಿದೆ.

ಇಂದು ಮಕ್ಕಳ ಶವಗಳು ಯುಜಿಡಿ ತ್ಯಾಜ್ಯದ ನೀರಿನ ಸಂಸ್ಕರಣಾ ಘಟಕದಲ್ಲಿ ಪತ್ತೆಯಾಗಿದ್ದು ಕುಟುಂಬಸ್ಥರ ರೋಧನೆ ಮುಗಿಲು ಮಟ್ಟಿದೆ. ಇದೇ ವೇಳೆ ಯುಜಿಡಿ ತ್ಯಾಜ್ಯ ನೀರು ಸಂಸ್ಕರಣಾ ಘಟಕದ ಎದುರು ಮೃತ ಮಕ್ಕಳ ಪೋಷಕರಿಂದ ಪ್ರತಿಭಟನೆ ಮಾಡಿದ್ದರು. ಸಂಸ್ಕರಣಾ ಘಟಕದಲ್ಲಿ ಸುರಕ್ಷತಾ ಕ್ರಮಗಳನ್ನು ತೆಗೆದುಕೊಂಡಿಲ್ಲ. ತ್ಯಾಜ್ಯ ಘಟಕಕ್ಕೆ ತಡೆಗೋಡೆ ಅಥವಾ ಬೇಲಿ ಹಾಕಿಲ್ಲ. ಹೀಗಾಗಿ ಮೂವರು ಮಕ್ಕಳು ನೀರಲ್ಲಿ ಮುಳುಗಿ ಮೃತಪಟ್ಟಿವೆ. ಮಹಾನಗರ ಪಾಲಿಕೆಯ ಅಧಿಕಾರಿಗಳು, ಸಿಬ್ಬಂದಿಗಳು ಇದಕ್ಕೆ ಕಾರಣವೆಂದು ಮಕ್ಕಳ ಕುಟುಂಬಸ್ಥರು ಆರೋಪಿಸಿದ್ದಾರೆ.