ಡೈಲಿ ವಾರ್ತೆ: 14/ಮೇ /2024
ಹೆಚ್.ಡಿ ರೇವಣ್ಣಗೆ ಜಾಮೀನು- ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದ ಅಭಿಮಾನಿಗಳು
ಹಾಸನ: ಕೆಆರ್ ನಗರ ಸಂತ್ರಸ್ತೆ ಮಹಿಳೆ ಕಿಡ್ನಾಪ್ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿದ್ದ ಮಾಜಿ ಸಚಿವ ರೇವಣ್ಣ ಅವರಿಗೆ ಕೋರ್ಟ್ ಜಾಮೀನು ಮಂಜೂರು ಮಾಡಿದೆ. ರೇವಣ್ಣ ಅವರಿಗೆ ಜಾಮೀನು ಮಂಜೂರು ಮಾಹಿತಿ ಸಿಗುತ್ತಿದ್ದಂತೆ ಹಾಸನ, ಹೊಳೆನರಸೀಪುರದಲ್ಲಿ ಸಂಭ್ರಮ ಮನೆ ಮಾಡಿತ್ತು. ರಸ್ತೆಗಿಳಿದ ರೇವಣ್ಣ ಅಭಿಮಾನಿಗಳು ಹಾಗೂ ಬೆಂಬಲಿಗರು ಪಟಾಕಿ ಸಿಡಿಸಿ, ಸಿಹಿ ಹಂಚಿ ಸಂಭ್ರಮಿಸಿದರು.
ಇದೇ ವೇಳೆ ಮಹಾತ್ಮಾಗಾಂಧಿ ವೃತ್ತಕ್ಕೆ ಆಗಮಿಸಿದ ಪೊಲೀಸರು ಪಟಾಕಿ ಸಿಡಿಸಿದ ಓರ್ವನನ್ನು ವಶಕ್ಕೆ ಪಡೆದ ಕಾರಣ ಜೆಡಿಎಸ್ ಕಾರ್ಯಕರ್ತರು ಹಾಗೂ ಪೊಲೀಸರ ನಡವೆ ವಾಗ್ವಾದ ನಡೆಯಿತು. ಕಾಂಗ್ರೆಸ್ನವರಿಗೆ ಅನುಮತಿ ನೀಡಿದ್ದೀರಾ ನಮಗೂ ಅನುಮತಿ ಕೊಡಿ ಅಂತಾ ರೇವಣ್ಣ ಅಭಿಮಾನಿಗಳು ಪ್ರತಿಭಟನೆಗೆ ಮುಂದಾದ್ರು. ಈ ವೇಳೆ ಪೊಲೀಸರು ಅನುಮತಿ ನೀಡುತ್ತಿದ್ದಂತೆ ಪಟಾಕಿ ಸಿಡಿಸಿದ ಅಭಿಮಾನಿಗಳು, ಜೆಡಿಎಸ್ (JDS) ಕಾರ್ಯಕರ್ತರು ಎಚ್.ಡಿ.ದೇವೇಗೌಡ ಹಾಗೂ ಎಚ್.ಡಿ.ರೇವಣ್ಣ ಪರ ಘೋಷಣೆ ಕೂಗಿದ್ರು.
ಹೊಳೆನರಸೀಪುರ ಕ್ಷೇತ್ರದಲ್ಲಿ ಯಾರು ಮಾಡದ ಅಭಿವೃದ್ದಿಯನ್ನು ನಮ್ಮ ರೇವಣ್ಣ ಮಾಡಿದ್ದಾರೆ. ಯಾರು ತಪ್ಪು ಮಾಡಿದ್ದಾರೆ ಅವರಿಗೆ ಶಿಕ್ಷೆ ಆಗಲಿ. ಆದರೆ ರೇವಣ್ಣ ಅವರನ್ನು ಬಂಧಿಸಿದ್ದು ತಪ್ಪು. ರಾಜಕೀಯ ಷಡ್ಯಂತ್ರದಿಂದ ನಮ್ಮ ರೇವಣ್ಣ ಅವರನ್ನು ಬಂಧಿಸಲಾಗಿದೆ. ರೇವಣ್ಣ ಅವರು ಹೊಳೆನರಸೀಪುರಕ್ಕೆ ಬರ್ತಿದ್ದಂತೆ ಗಾಂಧಿ ವೃತದಲ್ಲಿ ಹಾಲಿನ ಅಭಿಷೇಕ ಮಾಡುವ ಮೂಲಕ ಅವರ ಮೇಲೆ ಬಂದ ಕಳಂಕವನ್ನು ದೂರ ಮಾಡುತ್ತೇವೆ ಎಂದರು. ನಮ್ಮ ಕ್ಷೇತ್ರದಲ್ಲಿ ಅವರು ಮಾಡಿದ ಕೆಲಸವನ್ನು ಮರೆಯಲ್ಲ. ರೇವಣ್ಣಗೆ ಜಾಮೀನು ಸಿಕ್ಕಿರೋದ್ರಿಂದ ಹೊಳೆನರಸೀಪುರದಲ್ಲಿ ಹಬ್ಬದ ವಾತಾವರಣವೇ ನಿರ್ಮಾಣವಾಗಿದೆ ಅಂತ ಅಭಿಮಾನಿಗಳು ಭಾವುಕರಾದರು.