ಡೈಲಿ ವಾರ್ತೆ: 25/ಮೇ /2024

ಕೆಸಿ ಜನರಲ್ ಹಾಸ್ಪಿಟಲ್ನಲ್ಲಿ ಅಮಾನವೀಯ ಘಟನೆ: ಐಸಿಯುನಲ್ಲಿ ಇದ್ದ ವ್ಯಕ್ತಿಗೆ ರಕ್ತ ಬರುವ ಹಾಗೆ ಥಳಿಸಿದ ಆಸ್ಪತ್ರೆ ಸಿಬ್ಬಂದಿ

ಬೆಂಗಳೂರು: ಕೆಸಿ ಜನರಲ್ ಹಾಸ್ಪಿಟಲ್ನಲ್ಲಿ ಮತ್ತೊಂದು ಅಮಾನವೀಯ ಘಟನೆ ನಡೆದಿದ್ದು, ಐಸಿಯು(ICU)ನಲ್ಲಿ ಇದ್ದ ವ್ಯಕ್ತಿಗೆ ಆಸ್ಪತ್ರೆಯ ಸಿಬ್ಬಂದಿ ರಕ್ತ ಬರುವ ಹಾಗೆ ಥಳಿಸಿದ ಘಟನೆ ಮೇ. 24 ರಂದು ಶುಕ್ರವಾರ ರಾತ್ರಿ ನಡೆದಿದೆ.

ನೆಲಮಂಗಲ ಮೂಲದ ವೆಂಕಟೇಶ್ ಎಂಬುವವರು ವಿಷ ಸೇವಿಸಿ ಐಸಿಯು ವಾರ್ಡ್ ಸೇರಿದ್ದರು. ಈ ವೇಳೆ ಆಸ್ಪತ್ರೆಯ ವಾರ್ಡ್ ಬಾಯ್ ಧನಂಜಯ್ ಎಂಬಾತ ಇಗ್ಗಾ ಮುಗ್ಗ ಹೊಡೆದಿರುವ ಶಂಕೆ ವ್ಯಕ್ತವಾಗಿದೆ. ಚಿಕಿತ್ಸೆ ವೇಳೆ ಕೂಗಾಡಿದ ಎನ್ನುವ ಕಾರಣಕ್ಕೆ ಥಳಿತ ಮಾಡಿದ್ದಾರೆ ಎನ್ನುವ ಆರೋಪ ಕೇಳಿಬಂದಿದ್ದು, ಆಸ್ಪತ್ರೆ ಬೇಜವಾಬ್ದಾರಿತನದ ವಿರುದ್ಧ ಗಾಯಾಳು ವೆಂಕಟೇಶ್ ಸಂಬಂಧಿಕರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಕೆ.ಸಿ ಜನರಲ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕಿ ಹೇಳಿದ್ದಿಷ್ಟು
ಇನ್ನು ಘಟನೆ ಕುರಿತು ಕೆ.ಸಿ ಜನರಲ್ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕಿ ಇಂದಿರಾ ಕಬಾಡೆ ಅವರು ಸ್ಪಷ್ಟನೆ ನೀಡಿದ್ದು, ‘ವಿಷ ಕುಡಿದ ಹಿನ್ನೆಲೆ ಮೇ. 22 ರಂದು ಬಂದು ನಮ್ಮ ಆಸ್ಪತ್ರೆಯಲ್ಲಿ ಅಡ್ಮಿಟ್ ಆಗಿದ್ದರು.  ಆನೇಕಲ್ ಆಸ್ಪತ್ರೆಯೊಂದರಲ್ಲಿ ಮೊದಲು ಚಿಕಿತ್ಸೆ ಪಡೆದು ಬಳಿಕ ಇಲ್ಲಿಗೆ ಬಂದಿದ್ದರು. ನಮ್ಮ ವೈದ್ಯರು ಸಹ ಉತ್ತಮ ರೀತಿಯಲ್ಲಿ ಚಿಕಿತ್ಸೆ ಕೊಟ್ಟಿದ್ದಾರೆ. ಒಂದು ಸೂಕ್ಷ್ಮ ಚಿಕಿತ್ಸೆ ಕೊಡುವಾಗ ರೋಗಿಗಳು ಒಮ್ಮೊಮ್ಮೆ ವ್ಯತಿರಿಕ್ತವಾಗಿ ವರ್ತಿಸುತ್ತಾರೆ. ಅದರಲ್ಲೂ ಅವರು ತೀವ್ರ ನಿಗಾ ಘಟಕದಲ್ಲಿ ಇರೋದರಿಂದ ಅವರನ್ನು ಕಂಟ್ರೋಲ್ ಮಾಡೋದು ಕಷ್ಟ.
ಆಸ್ಪತ್ರೆ ಸಿಸಿಟಿವಿ ಸಹ ಸರಿಯಾಗಿ ವರ್ಕ್ ಆಗುತ್ತಿಲ್ಲ
‘ನಾನು ಕೂಡ ಅವರ ಬಳಿ ಹೋಗಿ ಸಮಸ್ಯೆ ಕೇಳಿದ್ದೇನೆ. ಆಸ್ಪತ್ರೆ ಸಿಸಿಟಿವಿ ಸಹ ಸರಿಯಾಗಿ ವರ್ಕ್ ಆಗುತ್ತಿಲ್ಲ. ಇಲ್ಲಿ ಹಲವು ಅಭಿವೃದ್ಧಿ ಕಾರ್ಯ ಆಗದೆ ಇರುವುದರಿಂದ ನಿನ್ನೆ ಘಟನೆ ಏನಾಗಿದೆ ಎಂದು ತಿಳಿಯುತ್ತಿಲ್ಲ. ನಮ್ಮ ಸಿಬ್ಬಂದಿ ಹಲ್ಲೆ ಮಾಡಿದ್ದಾರೆ ಎಂದು ನಂಬೋಕೆ ನನಗೂ ಸಾಧ್ಯ ಆಗುತ್ತಿಲ್ಲ. ಹಲ್ಲೆ ಮಾಡಿದ್ದಾರೆ ಅನ್ನೋದು ಸುಳ್ಳು. ಧನಂಜಯ್ ಸೆಕೆಂಡ್ ಶಿಫ್ಟ್ನಲ್ಲಿದ್ದಾರೆ. ಅವರು ಬಂದ್ಮೇಲೆ ರೋಗಿಯ ಕುಟುಂಬದ ಮುಂದೆನೇ ವಿಚಾರಣೆ ಮಾಡುತ್ತೇವೆ. ಆತ ಹಲ್ಲೆ ಮಾಡಿದ್ರೇ ಆತನ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಮೇಲ್ನೋಟಕ್ಕೆ ಹಲ್ಲೆ ಆಗಿದೆ ಎನ್ನುವುದಾಗಿ ಕಾಣಿತ್ತಿಲ್ಲ ಎಂದರು.

ಪೇಷಂಟ್ ಕೂಗಾಡ್ತಿದ್ದ ಎಂದು ಹೇಳಿ ವಾರ್ಡ್ ಬಾಯ್ ಹಲ್ಲೆ ಆರೋಪ
ರೋಗಿ ಸಂಬಂಧಿ ಲಲಿತ ಎಂಬುವವರು ಮಾತನಾಡಿ, ‘ನಮ್ಮವರು ವಿಷ ಕುಡಿದು ಕೆಸಿ ಜನರಲ್ ಆಸ್ಪತ್ರೆ ಐಸಿಯುನಲ್ಲಿ ಸೇರಿದ್ದರು. ಈ ವೇಳೆ ‘ಧನಂಜಯ ಎಂಬ ವಾರ್ಡ್ ಬಾಯ್ ಪೇಷಂಟ್ ಕೂಗಾಡುತ್ತಿದ್ದ ಎಂದು ಹೇಳಿ ಬಾಯಿ, ಮೂಗಿನ ಮೇಲೆ ಹಲ್ಲೆ ಮಾಡಿದ್ದಾನೆ ಎಂದು ಆರೋಪಿಸಲಾಗಿದೆ. ಈ ಸಂಬಂಧ ಪೋಲಿಸರಿಗೂ ಸಹ ದೂರು ನೀಡಿದ್ದೇವೆ. ನಿನ್ನೆ(ಮೇ.24) ರಾತ್ರಿ 7.30 ರ ಸುಮಾರಿಗೆ ಈ ಘಟನೆ ನಡೆದಿದೆ. ವೈದ್ಯರಿಗೂ ಸಹ ಮಾಹಿತಿ ನೀಡಿದ್ದೇವೆ. ಹಲ್ಲೆ ಮಾಡಿದ ವಾರ್ಡ್ ಬಾಯ್ ವಿರುದ್ಧ ಕ್ರಮ ಕೈಗೊಳ್ಳಬೇಕು. ಸಿಸಿಟಿವಿ ಕ್ಯಾಮೆರಾ ಪರಿಶೀಲಿಸುವಂತೆ ಹೇಳಿದರೆ, ಅದು ವರ್ಕ್ ಆಗುತ್ತಿಲ್ಲ. ಮೊದಲು ರೋಗಿ ಗುಣ ಆಗುವ ಕಡೆ ಗಮನವಹಿಸಿ ಅಂತಿದ್ದಾರೆ ಎಂದು ಹೇಳಿದರು.