ಡೈಲಿ ವಾರ್ತೆ: 28/ಮೇ /2024
ವಿಮಾನಕ್ಕೆ ಬಾಂಬ್ ಬೆದರಿಕೆ: ಜೀವ ಭಯದಿಂದ ವಿಮಾನದ ಕಿಟಕಿಯಿಂದ ಹಾರಿದ ಪ್ರಯಾಣಿಕರು
ನವದೆಹಲಿ: ದೆಹಲಿಯಿಂದ ವಾರಣಾಸಿಗೆ ತೆರಳಲು ಸಿದ್ದವಾಗಿದ್ದ ಇಂಡಿಗೋ ವಿಮಾನಕ್ಕೆ ಬಾಂಬ್ ಬೆದರಿಕೆ ಬಂದ ಹಿನ್ನೆಲೆಯಲ್ಲಿ ಆತಂಕಗೊಂಡ ಪ್ರಯಾಣಿಕರು ವಿಮಾನ ಸಿಬಂದಿಗಳು ಜೀವ ಭಯದಲ್ಲಿ ವಿಮಾನದ ಕಿಟಕಿಯ ಮೂಲಕ ಜಿಗಿದು ಪ್ರಾಣ ಉಳಿಸಿಕೊಳ್ಳಲು ಮುಂದಾದ ಘಟನೆ ನಡೆದಿದೆ.
ಮಂಗಳವಾರ ಬೆಳಗ್ಗೆ ಇಂಡಿಗೋ ವಿಮಾನ ಪ್ರಯಾಣಿಕರನ್ನು ಹೊತ್ತು ದೆಹಲಿಯಿಂದ ಬನಾರಸ್‌ಗೆ ಟೇಕ್ ಆಫ್ ಆಗಬೇಕಿತ್ತು, ಇನ್ನೇನು ಟೇಕ್ ಆಫ್ ಆಗಬೇಕು ಎನ್ನುವಷ್ಟರಲ್ಲಿ ವಿಮಾನದಲ್ಲಿ ಬಾಂಬ್ ಇದೆ ಎಂಬ ಸುದ್ದಿ ಹರಡಿದೆ ಇದರಿಂದ ಗಾಬರಿಗೊಂಡ ಪ್ರಯಾಣಿಕರು ಹಾಗೂ ವಿಮಾನ ಸಿಬಂದಿಗಳು ವಿಮಾನದಿಂದ ಹೊರಬರಲು ಯತ್ನಿಸಿದ್ದಾರೆ ಇನ್ನು ಕೆಲವರು ವಿಮಾನದ ತುರ್ತು ನಿರ್ಗಮನದ ಕಿಟಕಿಯ ಮೂಲಕ ಹೊರಬಂದಿದ್ದಾರೆ ಇನ್ನು ಕೆಲವರು ವಿಮಾನದ ಕಿಟಕಿಯ ಮೂಲಕ ಹೊರಗೆ ಜಿಗಿದು ಕಾಲಿಗೆ ಏಟು ಮಾಡಿಕೊಂಡಿದ್ದಾರೆ.
ಬಾಂಬ್ ಇರುವ ವಿಚಾರ ತಿಳಿಯುತ್ತಿದ್ದಂತೆ ಎಚ್ಚೆತ್ತ ಭದ್ರತಾ ಸಿಬಂದಿ ಕೂಡಲೇ ವಿಮಾನದಲ್ಲಿರುವ ಪ್ರಯಾಣಿಕರನ್ನು ಸುರಕ್ಷಿತವಾಗಿ ಹೊರಗೆ ಕಳುಹಿಸಿ ಬಳಿಕ ವಿಮಾನವನ್ನು ಪ್ರತ್ಯೇಕ ಸ್ಥಳಕ್ಕೆ ಕೊಂಡೊಯ್ದು ತಪಾಸಣೆ ನಡೆಸುತ್ತಿದ್ದಾರೆ ಆದರೆ ವಿಮಾನದೊಳಗೆ ಯಾವುದೇ ಸ್ಪೋಟಕ ವಸ್ತುಗಳು ಪತ್ತೆಯಾಗಿಲ್ಲ ಇದಾದ ಬಳಿಕ ವಿಮಾನ ನಿಲ್ದಾಣದಲ್ಲಿದ್ದ ಇತರ ವಿಮಾನಗಳ ಹಾರಾಟವನ್ನು ಸ್ಥಗಿತಗೊಳಿಸಿ ಪರಿಶೀಲನೆ ನಡೆಸುತ್ತಿದ್ದಾರೆ.
ಇದುವರೆಗೂ ಯಾವುದೇ ಸ್ಪೋಟಕ ವಸ್ತುಗಳು ಪತ್ತೆಯಾಗದ ಹಿನ್ನೆಲೆಯಲ್ಲಿ ವಿಮಾನ ನಿಲ್ದಾಣದಲ್ಲಿ ಅಗ್ನಿಶಾಮಕ ತಂಡ, ಬಾಂಬ್ ನಿಷ್ಕ್ರಿಯ ತಂಡ, ಭದ್ರತಾ ಸಿಬಂದಿ ತಪಾಸಣೆ ಮುಂದುವರೆಸಿದ್ದು ಹೆಚ್ಚಿನ ಮಾಹಿತಿ ಇನ್ನಷ್ಟೇ ಲಭ್ಯವಾಗಬೇಕಿದೆ.