ಡೈಲಿ ವಾರ್ತೆ: 29/ಮೇ /2024

ಭಿನ್ನ ರಕ್ತ ಮಾದರಿಯ ಮೂತ್ರ ಪಿಂಡಗಳ ಯಶಸ್ವಿ ಜೋಡಣೆ: ವಿಶ್ವಪ್ರಸಿದ್ಧಿಯಾದ ಕುಂದಾಪುರ ಮೂಲದ ಡಾ. ಎ. ಕೆ. ಇಸ್ತಿಯಾಕ್ ಅಹಮ್ಮದ್

ಕುಂದಾಪುರ: ಜಗತ್ತಿನಲ್ಲಿಯೇ ಅಪರೂಪದ ಭಿನ್ನರಕ್ತ ಮಾದರಿಯ ಕಿಡ್ನಿ ಜೋಡಣೆ ಮೂಲಕ ಸಾಧನೆ ಮಾಡಿದ ಕುಂದಾಪುರ ಮೂಲದ ವೈದ್ಯ ಡಾ. ಎ.ಕೆ. ಇಸ್ತಿಯಾಕ್ ಅಹ್ಮದ್ ರನ್ನು ಗಲ್ಫ್ ಮಾದ್ಯಮಗಳು ಹಾಡಿ ಕೊಂಡಾಡಿವೆ! ವೈದ್ಯ ಲೋಕಕ್ಕೆ ಸವಾಲಾಗಿರುವ ಎರಡು ಭಿನ್ನ ಮಾದರಿಯ ರಕ್ತ ವರ್ಗಕ್ಕೆ ಸೇರಿದ ಮೂತ್ರ ಪಿಂಡಗಳನ್ನು ಜೋಡಿಸುವಲ್ಲಿ ಕುಂದಾಪುರ ಮೂಲದ ಡಾ. ಇಸ್ತಿಯಾಕ್ ಮತ್ತು ಅವರ ತಂಡ ಯಶಸ್ವಿಯಾಗಿದೆ. ವೈದ್ಯ ಲೋಕದಲ್ಲಿ ತೀರಾ ಅಪರೂಪದ್ದಾಗಿರುವ ಎಬಿಒ ಹೊಂದಾಣಿಕೆಯಾಗದ ಅತ್ಯಂತ ಸಂಕೀರ್ಣವಾದ ಈ ಶಸ್ತ್ರ ಚಿಕಿತ್ಸೆಯನ್ನು ಅಬುದಾಭಿಯ ಖ್ಯಾತ ಆಸ್ಪತ್ರೆ ಬುರ್ಜೀಲ್‌ ಮೆಡಿಕಲ್ ಸಿಟಿ ಆಸ್ಪತ್ರೆಯಲ್ಲಿ ನಡೆಸಲು ವೈದ್ಯ ಡಾ. ಇಸ್ತಿಯಾಕ್ ಮತ್ತು ತಂಡ ತೀರ್ಮಾನಿಸಿದ್ದಲ್ಲದೇ ಯಶಸ್ವಿಯಾಗಿರುವುದನ್ನು ಗಲ್ಫ್ ಮಾಧ್ಯಮಗಳು ಹೆಡ್ ಲೈನ್ ನಲ್ಲಿ ಬಣ್ಣಿಸಿವೆ.

ಏನಿದು ಸ್ಟೋರಿ?:
ರೇವತಿ ಹಾಗು ಕಾರ್ತಿಕೇಯನ್ ದಂಪತಿಗಳು ತಮ್ಮ ಎರಡು ಪುಟ್ಟ ಮಕ್ಕಳೊಂದಿಗೆ 2018ರಿಂದ ಅಬುದಾಭಿಯಲ್ಲಿ ವಾಸಿಸುತ್ತಿರುವ ಅನಿವಾಸಿ ಭಾರತೀಯರು. ಆದರೆ ಕಾರ್ತಿಕೇಯನ್ ಪತ್ನಿ 32 ವರ್ಷ ಪ್ರಾಯದ ರೇವತಿಗೆ ಮೂತ್ರ ಪಿಂಡಗಳಲ್ಲಿ ಸೋಂಕು ಕಂಡುಬಂದಿತ್ತು. 2022ರ ನಂತರ ಹಿಮೋಡಯಾಲಿಸಿಸ್‌ ನಂತಹ ಹಲವು ಚಿಕಿತ್ಸೆಗಳ ಪರಿಣಾಮ ಹಾರ್ಟ್ ಅಟ್ಯಾಕ್ ಸಂಭವಿಸಿತು. ಜೊತೆ ಜೊತೆಗೇ ನಿಷ್ಕ್ರಿಯ ಗೊಂಡ ಅವರ ಮೂತ್ರ ಪಿಂಡಗಳನ್ನು ಬದಲಾಯಿಸಲೇಬೇಕಾದ ಅನಿವಾರ್ಯತೆ ಉಂಟಾಯಿತು.
ಇದರಿಂದ ಕಾರ್ತಿಕೇಯನ್ ದಂಪತಿಗಳು ಮೃತ ದೇಹಗಳ ಸಹಿತ ಜೀವಂತ ಕಿಡ್ನಿ ದಾನಿಗಳ ಮೊರೆ ಹೋದರೂ ಯಾವುದೇ ಫಲ ದೊರಕಲಿಲ್ಲ. ಆಗ ಮುಂದೆ ಬಂದ ರೇವತಿ ತಂದೆ ತಮ್ಮ ಮೂತ್ರ ಪಿಂಡವನ್ನು ಮಗಳಿಗೆ ದಾನ ನೀಡಲು ಮುಂದಾದರು. ಆದರೆ ತಂದೆ ಮಗಳ ರಕ್ತಮಾದರಿ ಹೋಲಿಕೆಯಾದರೂ ಹೃದಯ ಸಮಸ್ಯೆ ಹಾಗೂ ಹೆಚ್ಚಿನ ಮಟ್ಟದ ರಕ್ತದೊತ್ತಡದ ಕಾರಣದಡಿ ರೇವತಿ ಅವರ ತಂದೆಯ ಮೂತ್ರಪಿಂಡಗಳ ಕಸಿಯನ್ನು ಕೊನೆ ಕ್ಷಣಗಳಲ್ಲಿ ಅನರ್ಹ ಗೊಳಿಸಲಾಗಿತ್ತು. ಇತ್ತ, ಪತ್ನಿಯನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳಲೇಬೇಕು ಎಂದು ದೃಢನಿರ್ಧಾರ ಮಾಡಿದ ಕಾರ್ತಿಕೇಯನ್, ಅಬುಧಾಬಿ ಬುರ್ಜಿಲ್ ಮೆಡಿಕಲ್ ಸಿಟಿಯ ನೆಫ್ರಾಲಜಿಸ್ಟ್ ಮತ್ತು ಟ್ರಾನ್ಸ್ ಪ್ಲಾಂಟ್ ತಜ್ಞ ಡಾ. ಇಸ್ತಿಯಾಕ್ ಅಹ್ಮದ್ ಅವರನ್ನು ಸಂಪರ್ಕಿಸಿದರು. ಬುರ್ಜಿಲ್ ಆಸ್ಪತ್ರೆಯ ಡಾ.ಇಸ್ತಿಯಾಕ್ ನೇತೃತ್ವದ ಡಾ. ರೀಹಾನ್ ಸೈಫ್, ಡಾ.ವೆಂಕಟ್ ಸೈನರೇಶ್, ಡಾ.ರಾಮಮೂರ್ತಿ ಜಿ.ಭಾಸ್ಕರನ್, ಡಾ. ನಿಕೋಲಸ್ ವ್ಯೋನ್ ನೆಫ್ರಾಲಜಿಸ್ಟ್ ವೈದ್ಯ ತಂಡವು ರೇವತಿ ಅವರ ಮೂತ್ರ ಪಿಂಡ ಕಸಿಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿತು. ಹಲವು ದಿನಗಳ ತುರ್ತು ನಿಗಾ ಘಟಕದ ನಂತರ ರೇವತಿ ಅವರ ದೇಹವು
ಮೂತ್ರಪಿಂಡ ಕಸಿಗೆ ಹೊಂದಿಕೊಂಡಿದ್ದು ಅವರು ಸಾಮಾನ್ಯ ಜೀವನಕ್ಕೆ ಮರಳುತ್ತಿದ್ದಾರೆ.

ಯಾರಿವರು ಡಾ. ಇಸ್ತಿಯಾಕ್?
ಕುಂದಾಪುರದ ಉದ್ಯಮಿ ಹಾಜಿ ಅಬ್ದುಲ್ ಖಾದರ್ ಯೂಸುಫ್ ಅವರ ಪುತ್ರರಾಗಿರುವ ಡಾ. ಇಸ್ತಿಯಾಕ್. ಕುಂದಾಪುರ ಗರ್ಲ್ಸ್ ಶಾಲೆ, ಬೋರ್ಡ್ ಹೈಸ್ಕೂಲ್, ಭಂಡಾರ್ಕಾರ್ಸ್ ಕಾಲೇಜಿನಲ್ಲಿ ಶಿಕ್ಷಣ ಪಡೆದು ಮಂಗಳೂರಿನ ಕೆ.ಎಂ.ಸಿ. ಯಲ್ಲಿ ಎಂ.ಬಿ.ಬಿ.ಎಸ್. ಎಂ.ಡಿ ಪದವಿ ಪಡೆದು, ವೆಲ್ಲೂರಿನ ಕ್ರಿಶ್ಚಿಯನ್ ಮೆಡಿಕಲ್‌ ಕಾಲೇಜಿನಲ್ಲಿ ಡಿ.ಎಂ. ಪುರಸ್ಕೃತರಾಗಿದ್ದಾರೆ. ಬೆಂಗಳೂರಿನ ನಾರಾಯಣ ಹೃದಯಾಲಯ ಆಸ್ಪತ್ರೆಯ ಸಹಿತ ಹಲವು ಖ್ಯಾತ ಆಸ್ಪತ್ರೆಗಳಲ್ಲಿ ಸೇವೆ ಸಲ್ಲಿಸಿರುವ ಇವರು ಇದೀಗ ಅಬುದಾಭಿಯ ಬುರ್ಜಿಲ್ ಮೆಡಿಕಲ್‌ ಸಿಟಿಯಲ್ಲಿ ಮುಖ್ಯ ವೈದ್ಯಾಧಿಕಾರಿಯಾಗಿದ್ದಾರೆ.