

ಡೈಲಿ ವಾರ್ತೆ: ಫೆ./25/2026

ಕೊರ್ಗಿ: ಸ್ಕೂಟಿ ಸ್ಕಿಡ್ ಆಗಿ ತೋಡಿಗೆ ಬಿದ್ದು ಕಿರಾಣಿ ವ್ಯಾಪಾರಿ ಮೃತ್ಯು

ಕುಂದಾಪುರ, ಫೆ.24: ಚಲಿಸುತ್ತಿದ್ದ ಸ್ಕೂಟರ್ ಸವಾರನ ನಿಯಂತ್ರಣ ತಪ್ಪಿ ರಸ್ತೆ ಬದಿಯ ತೋಡಿಗೆ ಬಿದ್ದು ಸವಾರ ಮೃತಪಟ್ಟ ಘಟನೆ ಕೊರ್ಗಿ ಗ್ರಾಮದ ಚಾರುಕೊಟ್ಟಿಗೆ ಸಾಗಿನಗುಡ್ಡೆ ಬಸ್ ನಿಲ್ದಾಣದ ಬಳಿ ಮಂಗಳವಾರ ರಾತ್ರಿ ಸಂಭವಿಸಿದೆ.
ಮೃತರನ್ನು ಪ್ರತಾಪ ಶೆಟ್ಟಿ ಎಂದು ಗುರುತಿಸಲಾಗಿದೆ. ಇವರು ಬ್ರಹ್ಮಾವರದಲ್ಲಿ ಕಿರಾಣಿ ಅಂಗಡಿ ನಡೆಸುತ್ತಿದ್ದು ಫೆ. 24 ರಂದು ರಾತ್ರಿ ಸುಮಾರು 8:30 ಗಂಟೆಯ ವೇಳೆಗೆ ಪ್ರತಾಪ ಶೆಟ್ಟಿ ಬ್ರಹ್ಮಾವರದಿಂದ ಮನೆ ಕಡೆಗೆ ಸ್ಕೂಟಿಯಲ್ಲಿ ಬರುತ್ತಿದ್ದರು. ಸ್ಕೂಟಿಯ ಹಿಂಭಾಗದಲ್ಲಿ ಕೃಷಿ ಸಾಮಗ್ರಿಗಳಾದ ಹಾರೆ, ಪಿಕಾಸೆ ಹಾಗೂ ಕೇಸರಿ ಬಣ್ಣದ ಪ್ಲಾಸ್ಟಿಕ್ ಬುಟ್ಟಿಯನ್ನು ಕಟ್ಟಿ ತೆಕ್ಕಟ್ಟೆ–ದಬ್ಬೆಕಟ್ಟೆ ರಸ್ತೆಯಲ್ಲಿ ಸಂಚರಿಸುತ್ತಿದ್ದರು. ಕೊರ್ಗಿ ಗ್ರಾಮದ ಚಾರುಕೊಟ್ಟಿಗೆ ಸಾಗಿನಗುಡ್ಡೆ ಬಸ್ ನಿಲ್ದಾಣದ ಹತ್ತಿರ ತಲುಪುವಷ್ಟರಲ್ಲಿ ಸ್ಕೂಟಿ ನಿಯಂತ್ರಣ ತಪ್ಪಿ ಸ್ಕಿಡ್ ಆಗಿ ರಸ್ತೆ ಬದಿಯ ಹೊಂಡದಂತಿರುವ ತೋಡಿಗೆ ಬಿದ್ದಿದ್ದಾರೆ.
ಘಟನೆಯ ಬಗ್ಗೆ ಮಾಹಿತಿ ತಿಳಿದ ರತ್ನಕರ ಶೆಟ್ಟಿ (56) ಅವರು ಸ್ಥಳಕ್ಕೆ ಧಾವಿಸಿ ನೋಡಿದಾಗ ಪ್ರತಾಪ ಶೆಟ್ಟಿ ತೋಡಿನಲ್ಲಿ ಗಾಯಗೊಂಡ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ತಲೆಗೆ ಗಂಭೀರ ಗಾಯವಾಗಿ ರಕ್ತಸ್ರಾವವಾಗುತ್ತಿತ್ತು. ತಕ್ಷಣ ಸ್ಥಳೀಯರ ಸಹಾಯದಿಂದ ಅವರನ್ನು ಕೋಟೇಶ್ವರದ ಎನ್.ಆರ್. ಆಚಾರ್ಯ ಆಸ್ಪತ್ರೆಗೆ ಸಾಗಿಸಲಾಯಿತು. ಆದರೆ ವೈದ್ಯರು ರಾತ್ರಿ ಸುಮಾರು 9:30 ಗಂಟೆಗೆ ಅವರನ್ನು ಮೃತ ಪಟ್ಟಿರುವುದಾಗಿ ದೃಢಪಡಿಸಿದರು.
ಈ ಸಂಬಂಧ ಕುಂದಾಪುರ ಸಂಚಾರ ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 21/2026ರಡಿ ಭಾರತೀಯ ನ್ಯಾಯ ಸಂಹಿತೆಯ ಕಲಂ 281 ಮತ್ತು 106(1) ಅನ್ವಯ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ.