ಡೈಲಿ ವಾರ್ತೆ: ಫೆ./25/2026

‘ಮೇ’ ಯಲ್ಲಿ ಪ್ರಥಮ ಬಾರಿಗೆ ವಿಧಾನಸೌಧದ ಆವರಣದಲ್ಲಿ ಯಕ್ಷಗಾನ ಪ್ರದರ್ಶನ – ಸ್ಪೀಕರ್‌ ಯು. ಟಿ. ಖಾದರ್‌

ಉಡುಪಿ: ಕರ್ನಾಟಕ ಯಕ್ಷಗಾನ ಅಕಾಡೆಮಿ ವತಿಯಿಂದ ವಿಧಾನಸಭಾ ಸಚಿವಾಲಯ ಮತ್ತು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಕಾರದಲ್ಲಿ ಬೆಂಗಳೂರಿನ ವಿಧಾನ ಸೌಧದ ಆವರಣದಲ್ಲಿ ಇದೇ ಪ್ರಥಮ ಬಾರಿಗೆ ಉಭಯತಿಟ್ಟುಗಳ ಸುಪ್ರಸಿದ್ಧ ಯಕ್ಷಗಾನ ಕಲಾವಿದರ ಕೂಡುವಿಕೆಯಲ್ಲಿ ಯಕ್ಷಗಾನ ಪ್ರದರ್ಶನ ಮುಂಬರುವ ಮೇ ತಿಂಗಳಲ್ಲಿ ಆಯೋಜಿಸಲಾಗುವುದು ಎಂದು ವಿಧಾನಸೌಧದ ಸ್ಪೀಕರ್‌ ಯು. ಟಿ .ಖಾದರ್‌ ತಿಳಿಸಿದ್ದಾರೆ.

ಈ ಬಗ್ಗೆ ಕರ್ನಾ ಟಕ ಯಕ್ಷಗಾನ ಅಕಾಡೆಮಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ನೇತೃತ್ವದ ಅಕಾಡೆಮಿ ನಿಯೋಗ ಮಂಗಳವಾರ ವಿಧಾನಸೌಧದ ಸ್ಪೀಕರ್‌ ಯು. ಟಿ .ಖಾದರ್‌ ಅವರನ್ನು ಭೇಟಿ ಮಾಡಿ ಸಮಾಲೋಚನೆ ನಡೆಸಿತು.

ನಿಯೋಗದ ಮನವಿಗೆ ಸ್ಪಂದಿಸಿದ ಸ್ಪೀಕರ್ ಯು. ಟಿ. ಖಾದರ್ ಅವರು ಶಾಸಕರು ಮತ್ತು ಪರಿಷತ್ ಸದಸ್ಯರು ವೀಕ್ಷಿಸಲು ಅನುಕೂಲವಾಗುವ ಹಾಗೆ ಹೆಸರಾಂತ ಯಕ್ಷಗಾನ ಕಲಾವಿದರನ್ನು ಒಳಗೊಂಡ ಯಕ್ಷಗಾನ ಪ್ರದರ್ಶನಕ್ಕೆ ಅವಕಾಶ ನೀಡುವುದಾಗಿ ತಿಳಿಸಿದರು.

ಈ ಸಂದರ್ಭದಲ್ಲಿ ವಿಧಾನಸಭಾ ಸಚಿವಾಲಯದ ಕಾರ್ಯದರ್ಶಿ ವಿಶಾಲಾಕ್ಷಿ, ಯಕ್ಷಗಾನ ಅಕಾಡೆಮಿ ರಿಜಿಸ್ಟ್ರಾರ್ ನಮೃತಾ ಎನ್., ಸದಸ್ಯರುಗಳಾದ ಕೊಪ್ಪಲ ಮೋಹನ್ ಕದ್ರಿ, ಸುಧಾಕರ ಶೆಟ್ಟಿ, ಪುಟ್ಟಸ್ವಾಮಿ ಎ. ಆರ್. ಉಪಸ್ಥಿತರಿದ್ದರು.