ಡೈಲಿ ವಾರ್ತೆ: 29/ಮೇ /2024
ಚನ್ನಗಿರಿ ಲಾಕಪ್ ಡೆತ್ ಪ್ರಕರಣಕ್ಕೆ ಬಿಗ್ ಟ್ವಿಸ್ಟ್ : ಆದಿಲ್ ಖಲೀಂ ಮರಣೋತ್ತರ ಪರೀಕ್ಷಾ ವರದಿ ಬಹಿರಂಗ
ದಾವಣಗೆರೆ: ಮಟ್ಕಾ ಜೂಜು ಆಡಿಸುತ್ತಿದ್ದ ದೂರಿನ ಹಿನ್ನೆಲೆಯಲ್ಲಿ ದಾವಣಗೆರೆ ಜಿಲ್ಲೆಯ ಚನ್ನಗಿರಿ ಪೊಲೀಸರು ವಿಚಾರಣೆಗಾಗಿ ಠಾಣೆಗೆ ಕರೆದೊಯ್ದ ಸಂದರ್ಭ ಮೃತಪಟ್ಟ ಆದಿಲ್ ಖಲೀಂ ಅವರ ಮರಣೋತ್ತರ ಪರೀಕ್ಷಾ ವರದಿ ಹೊರಬಂದಿದೆ.
ಇದೊಂದು ಲಾಕಪ್ ಡೆತ್. ಪೊಲೀಸರೇ ಸಾಯಿಸಿದ್ದಾರೆ ಎಂದು ಮೃತ ಆದಿಲ್ ಸಂಬಂಧಿಕರು ಆರೋಪಿಸಿದ್ದರು. ಇದೀಗ ಮರಣೋತ್ತರ ಪರೀಕ್ಷಾ ವರದಿ ಬಂದಿದ್ದು, ಆದಿಲ್ ಲೋ ಬಿಪಿಯಿಂದ ಹೃದಯಾಘಾತವಾಗಿ ಸಾವನ್ನಪ್ಪಿದ್ದಾರೆ ಎಂದು ವರದಿ ತಿಳಿಸಿದೆ.
ಮೇ 24ರಂದು ಪೊಲೀಸ್ ಕಸ್ಟಡಿಯಲ್ಲಿ ಇರುವಾಗಲೇ ಸಾವನ್ನಪ್ಪಿದ ಅದಿಲ್ ಮೃತದೇಹವನ್ನು ನ್ಯಾಯಾಧೀಶರ ಸಮ್ಮುಖದಲ್ಲಿ ಮರಣೋತ್ತರ ಪರೀಕ್ಷೆ ನಡೆಸಿದ್ದು, ಇಂದು ಮರಣೋತ್ತರ ಪರೀಕ್ಷೆಯ ವರದಿ ಬಂದಿದೆ. ಲೋ ಬಿಪಿಯಿಂದ ಹೃದಯಾಘಾತವಾಗಿ ಆದಿಲ್ ಸಾವನ್ನಪ್ಪಿದ್ದಾರೆ ಎಂದು ವೈದ್ಯಕೀಯ ವರದಿಯಿಂದ ತಿಳಿದುಬಂದಿದೆ. ವರದಿಯನ್ನು ಸ್ಥಳೀಯ ಪೊಲೀಸರು ಸಿಐಡಿ ಅಧಿಕಾರಿಗಳಿಗೆ ಒಪ್ಪಿಸಿದ್ದಾರೆ.
ಪ್ರಕರಣದ ತನಿಖೆಯನ್ನು ರಾಜ್ಯ ಸರ್ಕಾರ ಸಿಐಡಿ ತನಿಖೆಗೆ ವಹಿಸಿದೆ.