ಕುಂದಾಪುರ ಸರ್ಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ರಾಬರ್ಟ್ ರೆಬೆಲ್ಲೋ ಆವರಿಂದ
ಸಹೋದ್ಯೋಗಿಗೆ ಲೈಂಗಿಕ ಕಿರುಕುಳ ಆರೋಪ – ದೂರು ದಾಖಲು
ಡೈಲಿ ವಾರ್ತೆ: 31/ಮೇ /2024
ಕುಂದಾಪುರ ಸರ್ಕಾರಿ ಆಸ್ಪತ್ರೆ ಆಡಳಿತ ವೈದ್ಯಾಧಿಕಾರಿ ರಾಬರ್ಟ್ ರೆಬೆಲ್ಲೋ ಆವರಿಂದ ಸಹೋದ್ಯೋಗಿಗೆ ಲೈಂಗಿಕ ಕಿರುಕುಳ ಆರೋಪ – ದೂರು ದಾಖಲು
ಕುಂದಾಪುರ: ಸರಕಾರಿ ಆಸ್ಪತ್ರೆಯ ವೈದ್ಯೆಯೊಬ್ಬರಿಗೆ ಲೈಂಗಿಕ ಕಿರುಕುಳ ನೀಡಿದ ಬಗ್ಗೆ ಕುಂದಾಪುರ ಸರಕಾರಿ ಆಸ್ಪತ್ರೆಯ ಆಡಳಿತ ವೈದ್ಯಾಧಿಕಾರಿಗಳಾದ ಡಾ.ರಾಬರ್ಟ್ ರೆಬೆಲ್ಲೋ ವಿರುದ್ಧ ಕುಂದಾಪುರ ಠಾಣೆಯಲ್ಲಿ ಮೇ.30 ರಂದು ದೂರು ದಾಖಲಾಗಿದೆ.
ಸಂತ್ರಸ್ಥ ವೈದ್ಯೆ ಡಾ.ರಾಬರ್ಟ್ ರೆಬೆಲ್ಲೋ ವಿರುದ್ಧ ದೂರು ನೀಡುತ್ತಿದ್ದಂತೆ ಡಾ.ರಾಬರ್ಟ್ ರೆಬೆಲ್ಲೋ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಸಂತ್ರಸ್ಥ ವೈದ್ಯೆ ನೀಡಿದ ದೂರಿನಲ್ಲಿ ನಾನು ಕಳೆದ ಹಲವು ತಿಂಗಳಿನಿಂದ ಎನ್ ಆರ್ ಎಚ್ ಎಂ ಅಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದು ಕರ್ತವ್ಯದ ಆರಂಭದ ದಿನದಿಂದಲೂ ಆಡಳಿತ ವೈದ್ಯಾಧಿಕಾರಿ ರಾಬರ್ಟ್ ರೆಬೆಲ್ಲೋರವರಿಂದ ಮಾನಸಿಕ ಮತ್ತು ಲೈಂಗಿಕ ಕಿರುಕುಳಕ್ಕೆ ಒಳಗಾಗಿದ್ದೇನೆ ಎಂದು ತಿಳಿಸಿದ್ದಾರೆ. ಅಲ್ಲದೆ
ನನ್ನ ಕುಟುಂಬ ಮರ್ಯಾದೆ ಹಾಗೂ ನನ್ನ ಕಾಂಟ್ರಾಕ್ಟ್ ಉದ್ಯೋಗವನ್ನು ಕಾಯ್ದುಕೊಳ್ಳುವ ಸಲುವಾಗಿ ವಿಧಿಯಿಲ್ಲದೇ ಅಸಹಾಯಕಳಾಗಿ ಅವರ ಕೋರಿಕೆಗಳನ್ನು ತಿರಸ್ಕರಿಸಿ ಉತ್ತರಿಸುತ್ತಾ ಬಂದಿದ್ದೇನೆ. ಡಾ.ರಾಬರ್ಟ್ ರೆಬೆಲ್ಲೋ ರವರು ನನಗೆ ಮಾನಸಿಕ ಹಾಗೂ ವೈಯುಕ್ತಿಕ ಕಿರುಕುಳ ಹಾಗೂ ನನ್ನ ಚಾರಿತ್ರ್ಯ ವಧೆ ಮಾಡುವ ಪ್ರಯತ್ನ ಮಾಡಿರುವುದು ನನ್ನ ಜೀವನಕ್ಕೆ ಅತ್ಯಂತ ತೊಂದರೆಯಾಗಿರುವುದರಿಂದ ನನಗೆ ಕಾನೂನು ಪ್ರಕಾರ ನ್ಯಾಯ ಕೊಡಿಸಬೇಕಾಗಿ ಎಂದು ಸಂತ್ರಸ್ಥ ವೈದ್ಯೆ ದೂರು ನೀಡಿದ್ದಾರೆ.