ಡೈಲಿ ವಾರ್ತೆ: 01/ಜೂ./2024
ಟಾಯ್ಲೆಟ್ ಕೆಟ್ಟ ವಾಸನೆ: ಜಡ್ಜ್ ಮುಂದೆ ಅಳಲು ತೋಡಿಕೊಂಡ ಪ್ರಜ್ವಲ್ ರೇವಣ್ಣ
ಬೆಂಗಳೂರು: ಐಷಾರಾಮಿ ಜೀವನ ನಡೆಸುತ್ತಿದ್ದ ಪ್ರಜ್ವಲ್‌ಗೆ ಸಿಐಡಿ ಕಚೇರಿಯಲ್ಲಿ 6 ದಿನಗಳನ್ನು ಕಳೆಯುವುದೇ ದೊಡ್ಡ ಸವಾಲಾದಂತಿದೆ. ಶುಕ್ರವಾರ ನ್ಯಾಯಾಲಯದ ಕಟಕಟೆಯಲ್ಲಿ ನಿಂತು, ನನಗೆ ಎಸ್‌ಐಟಿ ಕೊಟ್ಟಿರುವ ಕೊಠಡಿಯ ಶೌಚಾಲಯದಲ್ಲಿ ಕೆಟ್ಟ ವಾಸನೆ ಬರುತ್ತಿರುವುದು ಹಿಂಸೆಯಾಗುತ್ತಿದೆ ಎಂದು ಪ್ರಜ್ವಲ್ ನ್ಯಾಯಾಧೀಶರ ಮುಂದೆ ಅಳಲು ತೋಡಿಕೊಂಡರು.
ಎಸ್‌ಐಟಿ ಅಧಿಕಾರಿಗಳು ಶುಕ್ರವಾರ ಪ್ರಜ್ವಲ್ ರೇವಣ್ಣ ಅವರನ್ನು 42ನೇ ಎಸಿಎಂಎಂ ಕೋರ್ಟ್‌ಗೆ ಹಾಜರುಪಡಿಸಿದರು. ಕೋರ್ಟ್ ಕಟಕಟೆಯಲ್ಲಿ ನಿಂತಿದ್ದ ಪ್ರಜ್ವಲ್‌ಗೆ ನ್ಯಾಯಾಧೀಶರು ಕೆಲವು ಪ್ರಶ್ನೆ ಕೇಳಿದರು. ನಿಮ್ಮ ಹೆಸರೇನು ಎಂದಾಗ ಪ್ರಜ್ವಲ್ ರೇವಣ್ಣ ಎಂದು ಉತ್ತರಿಸಿದರು.
ನಿಮಗೇನಾದರೂ ಟಾರ್ಚರ್ ಆಗುತ್ತಿದೆಯಾ, ನಿಮ್ಮನ್ನು ಬಂಧಿಸಿರುವ ವಿಷಯ ನಿಮ್ಮ ಪಾಲಕರ ಗಮನಕ್ಕೆ ಬಂದಿದೆಯಾ ಎಂದು ನ್ಯಾಯಾಧೀಶರು ಕೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಪ್ರಜ್ವಲ್, ಟಾರ್ಚರ್ ಅಂತ ಏನೂ ಆಗಲಿಲ್ಲ. ಆದರೆ ಎಸ್‌ಐಟಿ ಕಚೇರಿಯಲ್ಲಿ ನನಗೆ ಕೊಟ್ಟಿರುವ ಕೊಠಡಿಯ ಶೌಚಾಲಯದಲ್ಲಿ ಬಹಳ ವಾಸನೆ (ಕೆಟ್ಟ ಸ್ಮೆಲ್) ಬರುತ್ತಿದೆ ಎನ್ನುತ್ತಿದ್ದಂತೆ ಕೋರ್ಟ್‌ನಲ್ಲಿದ್ದವರೆಲ್ಲ ನಕ್ಕರು. ಆ ವೇಳೆ ನ್ಯಾಯಾಧೀಶರು ಸುಮ್ಮನಿರಲು ಸೂಚಿಸಿದರು. ಮುಂದುವರಿದು ಮಾತನಾಡಿದ ಪ್ರಜ್ವಲ್, ಕೆಟ್ಟ ವಾಸನೆಯಿಂದ ಉಸಿರಾಟಕ್ಕೆ ತೊಂದರೆ ಆಗುತ್ತಿದೆ. ಇಲ್ಲಿ ಇರಲು ಸ್ವಲ್ಪ ಹಿಂಸೆ ಆಗುತ್ತಿದೆ ಎಂದರು.