ಡೈಲಿ ವಾರ್ತೆ: 03/ಜೂ./2024
ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ “ ಭಾವ ಬಂಧ – ಅಳಿಸಲಾಗದ ಅನುಬಂಧ” ನಿವೃತ್ತ ಶಿಕ್ಷಕಿಯರಿಗೆ ಬೀಳ್ಕೊಡುಗೆ ಕಾರ್ಯಕ್ರಮ
ಬಂಟ್ವಾಳ : ಮಾಣಿ ಪೆರಾಜೆಯ ವಿದ್ಯಾನಗರದ ಬಾಲವಿಕಾಸ ಆಂಗ್ಲ ಮಾಧ್ಯಮ ಶಾಲೆಯಲ್ಲಿ 31 ವರ್ಷಗಳಿಂದ ಸಹ ಶಿಕ್ಷಕಿ ಹಾಗೂ ಮುಖ್ಯ ಶಿಕ್ಷಕಿಯಾಗಿ ಕರ್ತವ್ಯ ನಿರ್ವಹಿಸಿದ ವಿಜಯಲಕ್ಷ್ಮಿ ವಿ ಶೆಟ್ಟಿ ಹಾಗೂ 30 ವರ್ಷಗಳಿಂದ ಹಿಂದಿ ಭಾಷಾ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ ಮೋಹಿನಿ ಎ ರೈ ಇವರ “ಭಾವ ಬಂಧ – ಅಳಿಸಲಾಗದ ಅನುಬಂಧ” ಬೀಳ್ಕೊಡುಗೆ ಕಾರ್ಯಕ್ರಮ ಶಾಲಾ ಸಭಾಂಗಣದಲ್ಲಿ ನಡೆಯಿತು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಬಾಲವಿಕಾಸ ಟ್ರಸ್ಟ್ ನ ಅಧ್ಯಕ್ಷ ಪ್ರಹ್ಲಾದ ಶೆಟ್ಟಿ ಮಾತನಾಡಿ, ನಿವೃತ್ತ ಶಿಕ್ಷಕರ ಸುದೀರ್ಘ ಸೇವೆ ಅವಿಸ್ಮರಣೀಯ. ಇಬ್ಬರೂ ಶಿಕ್ಷಕರು ಸಮಾಜಮುಖಿಯಾಗಿದ್ದು ಸಂಸ್ಥೆಯ ಏಳಿಗೆಗೆ ಅವಿರತ ಪರಿಶ್ರಮ ಪಟ್ಟಿದ್ದಾರೆ.ಅವರ ಮುಂದಿನ ಜೀವನ ಸುಖಕರವಾಗಿರಲಿ” ಎಂದು ಹಾರೈಸಿದರು.
ಈ ಸಂದರ್ಭದಲ್ಲಿ ಸ್ವಯಂ ನಿವೃತ್ತಿಯನ್ನು ಪಡೆದುಕೊಂಡ ವಿಜಯಲಕ್ಷ್ಮಿ ವಿ ಶೆಟ್ಟಿ ಹಾಗೂ ಅವರ ಪತಿ ಎಸ್.ವಿಶ್ವನಾಥ ಶೆಟ್ಟಿ ಮತ್ತು ಮೋಹಿನಿ ಎ ರೈ ಮತ್ತು ಅವರ ಪತಿ ಅರುಣ್ ಕುಮಾರ್ ರೈ ಇವರಿಗೆ ಸಂಸ್ಥೆಯ ವತಿಯಿಂದ ಸನ್ಮಾನಿಸಿ, ನೆನಪಿನ ಕಾಣಿಕೆ ನೀಡಿ ಗೌರವಿಸಲಾಯಿತು .
ಸನ್ಮಾನ ಸ್ವೀಕರಿಸಿದ ವಿಜಯಲಕ್ಷ್ಮಿ ವಿ ಶೆಟ್ಟಿ ಮಾತನಾಡಿ, ನನ್ನ ಔದ್ಯೋಗಿಕ ಬದುಕಿನ ಹಂತ ಹಂತದ ಬೆಳವಣಿಗೆಗೆ ಬಾಲವಿಕಾಸ ಸಂಸ್ಥೆಯು ಬೆನ್ನೆಲುಬಾಗಿ ನಿಂತಿದೆ. ಸಂಸ್ಥೆಯು ಇನ್ನಷ್ಟು ಉತ್ತಮ ಸಾಧನೆಗಳನ್ನು ಮಾಡುತ್ತಾ ಬೆಳೆಯಲಿ ಎಂದು ಶುಭ ಹಾರೈಸಿದರು. ಮೋಹಿನಿ ಎ ರೈ ಮಾತನಾಡಿ, ಸಂಸ್ಥೆಯೊಂದಿಗಿನ ತಮ್ಮ ಒಡನಾಟ ಹಾಗೂ ಸವಿನೆನಪುಗಳನ್ನು ಹಂಚಿಕೊಂಡರು.
ಬಾಲವಿಕಾಸ ಟ್ರಸ್ಟ್ ನ ಕಾರ್ಯದರ್ಶಿ ಮಹೇಶ್ ಶೆಟ್ಟಿ ಶಿಕ್ಷಕಿಯರೊಂದಿಗಿನ ತಮ್ಮ ಬಾಲ್ಯದ ದಿನಗಳನ್ನು ಮೆಲುಕು ಹಾಕಿ, ತಮ್ಮ ಹಾಗೂ ಶಿಕ್ಷಕಿಯರಿಬ್ಬರ ಬಾಂಧವ್ಯವನ್ನು ಅಭಿವ್ಯಕ್ತಪಡಿಸಿದರು. ಶಾಲಾ ಆಡಳಿತಾಧಿಕಾರಿ ರವೀಂದ್ರ ಡಿ ಶಿಕ್ಷಕಿಯರು ಶಾಲೆಗೆ ಮಾಡಿದ ಸೇವೆಯ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.
ಸಹ ಶಿಕ್ಷಕಿಯರಾದ ವಿಶಾಲಾಕ್ಷಿ ಎಚ್ ಆಳ್ವ, ಐಡಾ ಲೋಬೋ, ಜಯಶ್ರೀ ಆಚಾರ್ಯ ಅವರು ತಮ್ಮ ಮನದಾಳದ ಮಾತುಗಳನ್ನು ಹಂಚಿಕೊಂಡರು. ವಿದ್ಯಾರ್ಥಿಗಳಾದ ಸ್ವಸ್ತಿ ಮತ್ತು ಪೂರ್ವಿ ಎ ಭಾರದ್ವಾಜ್ ಶಿಕ್ಷಕಿಯರ ಪಾಠ – ಪ್ರವಚನಗಳನ್ನು, ಹಿತನುಡಿಗಳನ್ನು ನೆನಪಿಸಿಕೊಂಡು ತಮ್ಮ ಮಾತಿನ ಮೂಲಕ ಗೌರವವನ್ನು ಅರ್ಪಿಸಿದರು. ವಿದ್ಯಾರ್ಥಿಗಳು ಗುರು ಶಿಷ್ಯರ ಬಾಂಧವ್ಯವನ್ನು ಹಾಡಿನ ಮೂಲಕ ಪ್ರಸ್ತುತಪಡಿಸಿದರು.
ಕಾರ್ಯಕ್ರಮದಲ್ಲಿ ಬಾಲವಿಕಾಸ ಟ್ರಸ್ಟ್ ನ ಸದಸ್ಯರಾದ ಸುಭಾಷಿಣಿ ಎ ಶೆಟ್ಟಿ, ಸಂಸ್ಥೆಯ ಶಿಕ್ಷಕ-ರಕ್ಷಕ ಸಂಘದ ಮಾಜಿ ಅಧ್ಯಕ್ಷರು ಹಾಗೂ ಪದಾಧಿಕಾರಿಗಳು, ಹಿರಿಯ ವಿದ್ಯಾರ್ಥಿಗಳು, ಕಾರ್ಯಕಾರಿ ಸಮಿತಿಯ ಸದಸ್ಯರು, ಶಾಲಾ ಸಿಬ್ಬಂದಿ ವರ್ಗ, ಪೋಷಕರು ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.
ಶಿಕ್ಷಕಿ ಸುಧಾ ಎನ್ ರಾವ್ ಸ್ವಾಗತಿಸಿ, ರಶ್ಮಿ ಕೆ ಫೆರ್ನಾಂಡಿಸ್ ವಂದಿಸಿದರು. ಶಿಕ್ಷಕಿಯರಾದ ಲೀಲಾ ಹಾಗೂ ಸಪ್ನ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.