ಡೈಲಿ ವಾರ್ತೆ: 05/ಜೂ./2024

ಶಾಸಕ ಪ್ರದೀಪ್ ಈಶ್ವರ್ ನಿವಾಸದ ಮೇಲೆ ಕಲ್ಲು ತೂರಾಟ, ಗಾಜು ಪುಡಿಪುಡಿ!

ಚಿಕ್ಕಬಳ್ಳಾಪುರ: ಇಲ್ಲಿನ ಶಾಸಕ ಪ್ರದೀಪ್ ಈಶ್ವರ್ ನಿವಾಸದ ಮೇಲೆ ಮಂಗಳವಾರ ರಾತ್ರಿ  ಕಲ್ಲು ತೂರಾಟ ನಡೆದಿದೆ. ಘಟನೆಯಲ್ಲಿ ಮನೆಗೆ ಹಾಕಲಾಗಿದ್ದ ಗಾಜುಗಳು ಪುಡಿಪುಡಿಯಾಗಿವೆ. ರಾಜಕೀಯ ದ್ವೇಷ ಹಿನ್ನೆಲೆಯಲ್ಲಿ ಕಿಡಿಗೇಡಿಗಳು ಈ ಕೃತ್ಯ ನಡೆಸಿರಬಹುದು ಎಂದು ಅಂದಾಜಿಸಲಾಗಿದೆ. ರಾಜಕೀಯ ವಿರೋಧಿಗಳ ವಿರುದ್ಧ ಭಯಂಕರ ಭಾಷಣ ಮಾಡುವ ಪ್ರದೀಪ್ ಈಶ್ವರ್ ವಿರುದ್ಧ ಸೇಡು ತೀರಿಸಿಕೊಳ್ಳುವ ಉದ್ದೇಶದಿಂದ ಕಲ್ಲು ಎಸೆದಿರಬಹುದು ಎಂದು ಹೇಳಲಾಗಿದೆ.

ಮಂಗಳವಾರ ಪ್ರಕಟವಾದ ಲೋಕಸಭಾ ಚುನಾವಣೆಯ ಫಲಿತಾಂಶದಲ್ಲಿ ಪ್ರದೀಪ್ ಈಶ್ವರ್ ಅವರ ರಾಜಕೀಯ ಪ್ರತಿಸ್ಪರ್ಧಿ ಡಾ. ಸುಧಾಕರ್ ಗೆಲುವ ಸಾಧಿಸಿದ್ದಾರೆ. ಆ ಬಳಿಕ ಸುಧಾಕರ್ ಅವರ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಸಂಭ್ರಮಾಚರಣೆ ಮಾಡಿದ್ದರು. ಅಲ್ಲದೆ ಸುಧಾಕರ್ ಒಂದೇ ಒಂದು ಓಟ್ ರಕ್ಷಾ ರಾಮಯ್ಯ ಅವರಿಗಿಂತ ಹೆಚ್ಚು ಪಡೆದರೆ ರಾಜಕೀಯ ನಿವೃತ್ತಿ ಪಡೆಯುತ್ತೇನೆ ಎಂದು ಹೇಳಿಕೆ ನೀಡಿದ್ದನ್ನು ಖಂಡಿಸಿದ್ದರು.
ರಾತ್ರಿ 10ರಿಂದ 11 ಗಂಟೆಯ ನಡುವೆ ಸುಧಾಕರ್ ಅವರ ಗೃಹಕಚೇರಿಯ ನಿವಾಸದ ಮೇಲೆ‌ ಕಲ್ಲು ತೂರಾಟ ನಡೆದಿದೆ. ಚಿಕ್ಕಬಳ್ಳಾಪುರ ನಗರದ ಕಂದವಾರದಲ್ಲಿ ಅವರ ಗೃಹಕಚೇರಿ ಇದ್ದು ಅಲ್ಲಿಗೆ ಕಲ್ಲು ತೂರಲಾಗಿದೆ. ತಡರಾತ್ರಿ ಮನೆಯ ಹಿಂಭಾಗದ ಮೂಲಕ ಕಲ್ಲು ತೂರಾಟ ಮಾಡಿರುವ ಕಿಡಿಗೇಡಿಗಳು ಅಲ್ಲಿಂದ ಪರಾರಿಯಾಗಿದ್ದಾರೆ. ಚಿಕ್ಕಬಳ್ಳಾಪುರ ಡಿವೈಎಸ್ಪಿ ಶಿವಕುಮಾರ್ ಭೇಟಿ ಪರಿಶೀಲನೆ ನಡೆಸಿದ್ದಾರೆ.