ಡೈಲಿ ವಾರ್ತೆ: 07/ಜೂ./2024
ಉತ್ತರಾಖಂಡ ದುರಂತ – ಮೃತ ಪದ್ಮನಾಭ ಭಟ್ಟರ ಕುಂಭಾಶಿಯ ಮೂಲ ಮನೆಯಲ್ಲಿ ಸೂತಕದ ಛಾಯೆ
ಕುಂದಾಪುರ : ಉತ್ತರಾಖಂಡ ರಾಜ್ಯಕ್ಕೆ ಟ್ರಕ್ಕಿಂಗ್ ಗೆ ಹೋಗಿ ದುರ್ಮರಣಕ್ಕೆ ಈಡಾದ 9 ಜನ ನತದೃಷ್ಟರಲ್ಲಿ ಓರ್ವರಾದ ಪದ್ಮನಾಭ ಭಟ್ ಮೂಲತಃ ಕುಂದಾಪುರ ತಾಲೂಕು ಕುಂಭಾಶಿಯವರು. ದುರ್ಘಟನೆಯ ಸುದ್ದಿ ಟಿ ವಿ ಯಲ್ಲಿ ಬಿತ್ತರವಾಗುತ್ತಿದ್ದಂತೆಯೇ ತೀವ್ರ ಆತಂಕಕ್ಕೀಡಾದ ಕುಟುಂಬದವರು, ಮೃತಪಟ್ಟವರ ಹೆಸರುಗಳ ಪಟ್ಟಿಯಲ್ಲಿ ಪದ್ಮನಾಭ ಕುಂದಾಪುರ ಎಂಬುದನ್ನು ನೋಡುತ್ತಲೇ ಆಘಾತಗೊಂಡಿದ್ದಾರೆ. ಮನೆಯಲ್ಲಿ ಸೂತಕದ ಛಾಯೆ ಆವರಿಸಿದ್ದು, ಟಿ ವಿ ಯಲ್ಲಿ ಪ್ರಸಾರವಾಗುವ ರಕ್ಷಣಾ ಕಾರ್ಯಾಚರಣೆ, ಪಾರ್ಥಿವ ಶರೀರಗಳ ರವಾನೆಯ ವಿವರಗಳನ್ನು ನೆಟ್ಟಗಣ್ಣಿನಿಂದ ನೋಡುತ್ತಿದ್ದಾರೆ.
ಕುಂಭಾಶಿಯ ಕೊರವಡಿ ರಸ್ತೆಯಲ್ಲಿರುವ ಶ್ರೀ ಹರಿಹರ ನಿಲಯವು ಮೃತ ಪದ್ಮನಾಭ ಭಟ್ಟರ ಹಿರಿಯರ ಮೂಲ ಮನೆ. ಇಲ್ಲೀಗ ಅವರ ಚಿಕ್ಕಪ್ಪನ (ತಂದೆಯ ಸಹೋದರ) ಕುಟುಂಬದವರು ವಾಸ್ತವಿಸಿದ್ದಾರೆ.
ಕೃಷ್ಣಮೂರ್ತಿ ಭಟ್ -ಸತ್ಯವತಿ ದಂಪತಿಯ ಪುತ್ರ ಪದ್ಮನಾಭ ಭಟ್. ಇವರಿಗೆ ಇಬ್ಬರು ಅಕ್ಕಂದಿರು, ಇಬ್ಬರು ತಂಗಿಯರಿದ್ದಾರೆ. ಕೃಷ್ಣಮೂರ್ತಿ ಭಟ್ಟರು ಬೆಂಗಳೂರಿನಲ್ಲೇ ವ್ಯವಹಾರ ನಡೆಸಿಕೊಂಡು ಅಲ್ಲೇ ನೆಲೆಸಿದ್ದರು. ಅಂತೆಯೇ ಪದ್ಮನಾಭ ಭಟ್ಟರ ಹುಟ್ಟು, ಬಾಲ್ಯ, ಪ್ರಾಥಮಿಕ ವಿದ್ಯಾಭ್ಯಾಸ ಬೆಂಗಳೂರಿನಲ್ಲೇ ನಡೆಯಿತು. ಅತ್ಯಂತ ಧರ್ಮ ಭೀರುಗಳಾಗಿದ್ದ ಕೃಷ್ಣಮೂರ್ತಿ ಭಟ್ಟರು ಮಕ್ಕಳನ್ನೂ ಶಿಸ್ತಿನಲ್ಲೇ ಬೆಳೆಸಿದ್ದರು. ಬಾಲ್ಯದಿಂದಲೂ ಪ್ರತಿಭಾವಂತನಾಗಿದ್ದ ಪದ್ಮನಾಭ, ಬೆಂಗಳೂರಿನಲ್ಲಿ ಸಿ ಎ ವ್ಯಾಸಂಗ ಮಾಡಿದ್ದರು. ನಂತರ ಖಾಸಗಿ ಕಂಪೆನಿಯಲ್ಲಿ ಸೇವೆ ಸಲ್ಲಿಸುತ್ತಿದ್ದ ಅವರು ಕಂಪೆನಿ ವತಿಯಿಂದಲೇ ಅಮೇರಿಕೆಗೆ ತೆರಳಿದರು. ಅಲ್ಲಿದ್ದ ಆರು ವರ್ಷಗಳಲ್ಲಿ ಅಲ್ಲಿನ ಸಿ ಪಿ ಎ ತೇರ್ಗಡೆಯಾದರು. ಬೆಂಗಳೂರಿಗೆ ಹಿಂತಿರುಗಿದ ಪದ್ಮನಾಭ ಕಂಪೆನಿ ಸೇವೆಯಲ್ಲಿ ಮುಂದುವರೆದರು. ವಿವಾಹಿತರಾಗಿ ಓರ್ವ ಪುತ್ರ, ಓರ್ವ ಪುತ್ರಿಯನ್ನು ಹೊಂದಿರುವ ಪದ್ಮನಾಭರಿಗೆ ಪ್ರವಾಸ, ಟ್ರಕ್ಕಿಂಗ್ ಇತ್ಯಾದಿಗಳಲ್ಲಿ ಆಸಕ್ತಿ ಜಾಸ್ತಿ. ಆಗಾಗ ಸಹೋದ್ಯೋಗಿಗಳು, ಸ್ನೇಹಿತರೊಡನೆ ದೂರದ ರಮಣೀಯ ಸ್ಥಳಗಳಿಗೆ ಪ್ರವಾಸ ಹೋಗುತ್ತಿರುತ್ತಾರೆ.
ಹಾಗೆಯೇ, ಮೇ 29 ರಂದು 22 ಜನರ ತಂಡದೊಂದಿಗೆ ಉತ್ತರಾಖಂಡ ರಾಜ್ಯದ ಉತ್ತರ ಕಾಶಿ ಎಂದು ಕರೆಯಲಾಗುವ ಬೆಟ್ಟ ಪ್ರದೇಶಕ್ಕೆ ಟ್ರಕ್ಕಿಂಗ್ ಹೋಗಿದ್ದರು. ಯಶಸ್ವಿಯಾಗಿ ಪ್ರವಾಸ ಮುಗಿಸಿ ಹುಲ್ಲುಗಾವಲಿನಂತ ಬೆಟ್ಟ ಪ್ರದೇಶದಿಂದ ಜೂನ್ 4 ರಂದು ಎಲ್ಲರೂ ಕೆಳಗಿಳಿಯುತ್ತಿದ್ದರು. 22 ಜನರ ತಂಡದಲ್ಲಿ ಒಂದಷ್ಟು ಜನ ಚಿಕ್ಕ ತಂಡವಾಗಿ ಕೆಳಗೆ ಇಳಿಯುತ್ತಿದ್ದರು. ಪದ್ಮನಾಭ ಸೇರಿದಂತೆ ಒಂಭತ್ತು ಜನರ ತಂಡ ಸುಮಾರು 15 ಸಾವಿರ ಅಡಿ ಎತ್ತರದಿಂದ ಕೆಳಗೆ ಇಳಿಯುತ್ತಿರುವಾಗ ಸುಮಾರು ಮಧ್ಯಾನ್ಹ 2 ಗಂಟೆಯ ವೇಳೆಗೆ ಬಲವಾದ ಶೀತ ಮಾರುತ ಬೀಸಲಾರಂಭಿಸಿತು ಎನ್ನಲಾಗಿದೆ. ನೂರು ಕಿ ಮೀ ಗಿಂತಲೂ ವೇಗವಾಗಿ ಬೀಸಿದ ಮಾರುತದಿಂದಾಗಿ ತಂಡದವರು ತೊಟ್ಟಿದ್ದ ಜರ್ಕಿನ್ ಗಳು ಚಿಂದಿ ಯಾದವು. ಆಧಾರ ತಪ್ಪಿದ ಇವರಿಗೆ ಯಾವ ಹಿಡಿತವೂ ಸಿಗಲಿಲ್ಲ. ಸುಮಾರು ನಾಲ್ಕು ಗಂಟೆ ಬೀಸಿದ ಮಾರುತ ಪರಿಸ್ಥಿಯನ್ನು ಘೋರವಾಗಿಸಿತು. ಕೆಲವರು ಓಡಿ ತಪ್ಪಿಸಿಕೊಂಡರು. ದುರ್ದೈವಿಗಳು ಶೀತ ಮಾರುತಕ್ಕೆ ಆಹುತಿಯಾದರು. ಈ ತಂಡದಲ್ಲಿ ಬೆಂಗಳೂರಿನ ಇಬ್ಬರು ಮಹಿಳೆಯರೂ ಇದ್ದು, ಅವರಿಬ್ಬರೂ 34 ಬಾರಿ ಈ ಬೆಟ್ಟವನ್ನು ಹತ್ತಿಳಿದಿದ್ದರಂತೆ. ಅವರೂ ವಿಧಿಯಾಟಕ್ಕೆ ಬಲಿಯಾಗಿದ್ದಾರೆ. ಶೀತ ಮಾರುತ ಇನ್ನೊಂದು ಗಂಟೆ ತಡವಾಗಿ ಬೀಸಿದ್ದರೂ ಎಲ್ಲ 22 ಮಂದಿಯೂ ಪಾರಾಗುತ್ತಿದ್ದರು.
ಬೆಂಗಳೂರಿನ ಭಟ್ಟರ ನಿವಾಸದಲ್ಲಿ ರೋದನ ಮುಗಿಲು ಮುಟ್ಟಿದೆ. ಅವರ ತಾಯಿ, ಪತ್ನಿ, ಪುತ್ರ, ಪುತ್ರಿ, ಸಹೋದರಿಯರು, ಕುಟುಂಬದವರು ತೀವ್ರ ಆಘಾತಕ್ಕೊಳಗಾಗಿದ್ದಾರೆ. ಉತ್ತರಾಖಂಡ ಸ್ಥಳೀಯಾಡಳಿತ, ಸೇನೆ ರಕ್ಷಣಾ ಕಾರ್ಯಾಚರಣೆ ನಡೆಸುತ್ತಿದ್ದು, ಕರ್ನಾಟಕ ಸರ್ಕಾರವೂ ಉತ್ತಮವಾಗಿ ಸ್ಪಂದಿಸಿದೆ ಎಂಬ ವಿವರಗಳನ್ನು ಭಟ್ಟರ ಸಹೋದರಿ ತಿಳಿಸಿದ್ದಾರೆ. ಸಂಸದ ತೇಜಸ್ವಿ ಸೂರ್ಯ ಕೂಡಾ ಸಹಕಾರ ನೀಡಿದ್ದಾರೆ ಎನ್ನಲಾಗಿದೆ.
ಪದ್ಮನಾಭ ಭಟ್ ತಮ್ಮ ಹಿರಿಯರ ತವರಾದ ಕುಂಭಾಶಿಯ ಬಗ್ಗೆ ತುಂಬ ಮಮತೆ ಹೊಂದಿದ್ದರು. ತಮ್ಮ ಕುಟುಂಬದವರು ಪೂಜೆ ನಡೆಸುತ್ತಿದ್ದ ಕುಂಭಾಶಿಯ ಶ್ರೀ ಹರಿಹರ ದೇವಾಲಯ ಅಭಿವೃದ್ಧಿಗೆ ಸಾಕಷ್ಟು ಸಹಕಾರ ನೀಡಿದ್ದರು. ಊರಿಗೆ ಬಂದಾಗೆಲ್ಲ ದೇವರ ದರ್ಶನ ಪಡೆದು ಸೇವೆಗಳನ್ನು ಸಲ್ಲಿಸುತ್ತಿದ್ದರು. ಅವರು ನಂಬಿದ್ದ, ತೆಕ್ಕಟ್ಟೆ ಸಮೀಪದ ಮಾಲಾಡಿಯ ಶ್ರೀ ನಂದಿಕೇಶ್ವರ ದೈವಕ್ಕೂ ರಜತ ಮುಖವಾಡ ಇತ್ಯಾದಿಗಳನ್ನು ಸಮರ್ಪಿಸಿದ್ದರು. ಮುಂದಿನ ಡಿಸೆಂಬರ್ ನಲ್ಲಿ ಊರಿಗೆ ಬಂದು ತಮ್ಮ ತಂದೆಯ ಸ್ಮರಣಾರ್ಥ ದೊಡ್ಡ ಕಾರ್ಯಕ್ರಮ, ಸೇವೆಗಳು, ಧಾರ್ಮಿಕ ಕಾರ್ಯಕ್ರಮಗಳನ್ನು ನಡೆಸಬೇಕು ಎಂಬ ಯೋಜನೆ ಹಾಕಿಕೊಂಡಿದ್ದರು. ಆದರೆ, ಅವೆಲ್ಲ ಕೈಗೂಡುವ ಮುನ್ನವೇ 50ರ ಹರೆಯದ ಪದ್ಮನಾಭ ಭಟ್ ವಿಧಿಯಾಟಕ್ಕೆ ಬಲಿಯಾಗಿದ್ದು ದೊಡ್ಡ ದುರಂತ.