ಡೈಲಿ ವಾರ್ತೆ: 20/NOV/2025

ಬಂಟ್ವಾಳ| ಮಾರುವೇಷದಲ್ಲಿ ಬಂದು ಪತಿಗೆ ಚೂರಿಯಿಂದ ಹಲ್ಲೆ: ಆರೋಪಿ ಪತ್ನಿಯ ಬಂಧನ

ಬಂಟ್ವಾಳ: ಮಹಿಳೆಯೋರ್ವಳು ತನ್ನ ಪತಿಗೆ ಚೂರಿಯಿಂದ ಇರಿದು ಹಲ್ಲೆ ನಡೆಸಿದ ಘಟನೆ ಬಿ.ಸಿ.ರೋಡ್ ಕೆಎಸ್ಸಾರ್ಟಿಸಿ ಬಸ್ ನಿಲ್ದಾಣದ ಬಳಿಯ ಸೋಮಯಾಜಿ ಟೆಕ್ಸ್ ಟೈಲ್ಸ್ ಮಳಿಗೆಯಲ್ಲಿ ಬುಧವಾರ ರಾತ್ರಿ ನಡೆದಿದೆ.
ಆರೋಪಿ ಮಹಿಳೆಯನ್ನು ಬಂಟ್ವಾಳ ನಗರ ಠಾಣಾ ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಸೋಮಯಾಜಿ ಟೆಕ್ಸ್ ಟೈಲ್ಸ್ ಮಳಿಗೆಯ ಮಾಲಕ ಕೃಷ್ಣ ಕುಮಾರ್ ಸೋಮಯಾಜಿ ಹಲ್ಲೆಯಿಂದ ಗಾಯಗೊಂಡವರು. ಅವರ ಪತ್ನಿ ಜ್ಯೋತಿ ಕೆ ಟಿ ಹಲ್ಲೆ ನಡೆಸಿದ ಆರೋಪಿ.
ಗಾಯಾಳು ಮಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.

ನ.19ರಂದು ರಾತ್ರಿ ಏಕಾಏಕಿ ಟೆಕ್ಸ್ ಟೈಲ್ಸ್ ಅಂಗಡಿಗೆ ಮಾರುವೇಷದಲ್ಲಿ ಬುರ್ಖಾಧಾರಿಯಾಗಿ ಬಂದ ಪತ್ನಿ ಜ್ಯೋತಿ ಕೆ ಟಿ ಅವರು ಅಂಗಡಿಯ ಕ್ಯಾಶ್ ಕೌಂಟರಿನಲ್ಲಿದ್ದ ಪತಿಗೆ ಚೂರಿಯಿಂದ ಇರಿದಿದ್ದಾರೆ ಎನ್ನಲಾಗಿದೆ.
ಘಟನೆಯ ಬಗ್ಗೆ ಮಾಹಿತಿ ಪಡೆದು ಸ್ಥಳಕ್ಕೆ ಧಾವಿಸಿದ ಬಂಟ್ವಾಳ ನಗರ ತಾಣಾ ಪೊಲೀಸರು ಕಾರ್ಯಪ್ರವೃತ್ತರಾಗಿ ಆರೋಪಿ ಜ್ಯೋತಿ ಸೋಮಯಾಜಿಯನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕೃಷ್ಣ ಕುಮಾರ್ ಸೋಮಯಾಜಿ ಮತ್ತು ಅವರ ಪತ್ನಿ ಜ್ಯೋತಿ ಕೆ.ಟಿ ರವರ ಮಧ್ಯೆ ಕೌಟುಂಬಿಕ ವಿಚಾರದಲ್ಲಿ ಮನಸ್ತಾಪವಿದ್ದು, ಇದೇ ದ್ವೇಷದಿಂದ ಕೃಷ್ಣ ಕುಮಾರ್ ಸೋಮಯಾಜಿಯವರನ್ನು ಕೊಲ್ಲುವ ಉದ್ದೇಶದಿಂದ ಕತ್ತಿಯಿಂದ ಹಲ್ಲೆ ನಡೆಸಿರುತ್ತಾರೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಬಂಟ್ವಾಳ ನಗರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 131/2025, 00: 118(1), 118(2), 351(3), 109 2.2.2-2023, U/s: 2(1), (C), 27 Indian Arms act-1959 08 ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ.