
ಡೈಲಿ ವಾರ್ತೆ: 20/NOV/2025
ಬೆಂಗಳೂರಿನಲ್ಲಿ 7 ಕೋಟಿ ರೂ ದರೋಡೆ – ಇಲ್ಲಿದೆ ಸಂಪೂರ್ಣ ವಿವರ

ಬೆಂಗಳೂರು: ನಗರದ ಡೈರಿ ಸರ್ಕಲ್ ಫ್ಲೈಓವರ್ ಮೇಲೆ ಎಟಿಎಂ ವಾಹನದಲ್ಲಿದ್ದ ಬರೋಬ್ಬರಿ 7.11 ಕೋಟಿ ರೂ ದೋಚಿಕೊಂಡು ಗ್ಯಾಂಗ್ ಇನೋವಾ ಕಾರಿನಲ್ಲಿ ಪರಾರಿಯಾಗಿದೆ. ಈ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ. ಸಿಎಂಎಸ್ ಕಂಪನಿ ಮ್ಯಾನೇಜರ್ ದೂರಿನ ಆಧಾರದಲ್ಲಿ ಡಕಾಯಿತಿ ಎಂದು ಎಫ್ಐಆರ್ನಲ್ಲಿ ಉಲ್ಲೇಖಿಸಲಾಗಿದೆ. ದರೋಡೆಕೋರರು ಹೇಗೆ ಬಂದು ವಾಹನವನ್ನು ಹೈಜಾಕ್ ಮಾಡಿದರು? ಎಲ್ಲಿಗೆ ಕರೆದೊಯ್ದರು? ಬಳಿಕ ಹೇಗೆ ಹಣ ದೋಚಿಕೊಂಡು ಹೋದರು ಎನ್ನುವ ಬಗ್ಗೆ ಸಿಎಂಎಸ್ ವಾಹನ ಚಾಲಕ ಬಿನೋದ್ ವಿವರಿಸಿದ್ದಾರೆ.
ಇನ್ನು ಸಿಎಂಎಸ್ ವಾಹನ ಚಾಲಕ ಬಿನೋದ್ ಘಟನೆಯ ವಿವರ ನೀಡಿದ್ದು, ನಾವು ವಾಹನದಲ್ಲಿ ನಾಲ್ಕು ಜನ ಬಂದ್ವಿ. ಅವರು ಕಾರಲ್ಲಿ ಐದಾರು ಜನ ಬಂದು ನಾವು ಆರ್ ಬಿಐ ನವರು ಎಂದು ಹೇಳಿದರು. ಸಿಎಂಎಸ್ ವಾಹನದಲ್ಲಿದ್ದ ಉಳಿದವರನ್ನ ತಮ್ಮ ಕಾರಲ್ಲಿ ಹತ್ತಿಸಿಕೊಂಡ್ರು. ನನ್ನನ್ನ ಸಿಎಂಎಸ್ ವಾಹನದಲ್ಲೇ ಕರೆದುಕೊಂಡು ಹೋಗಿ ಡೈರಿ ಸರ್ಕಲ್ ಬ್ರಿಡ್ಜ್ ಮೇಲೆ ನಿಲ್ಲಿಸಿದರು. ಬಳಿಕ ನನ್ನ ಫೋನ್ ಕಿತ್ತುಕೊಂಡಿದ್ದು, ವಾಹನದಲ್ಲಿದ್ದ ಹಣ ತಮ್ಮ ಕಾರಿಗೆ ಶಿಫ್ಟ್ ಮಾಡಿಕೊಂಡು ಹೋಗಿದ್ದಾರೆ ಎಂದು ವಿವರಿಸಿದರು.
ದರೋಡೆಕೋರರ ಪತ್ತೆಗಾಗಿ ತಂಡ ರಚನೆ:
ಬೆಂಗಳೂರಿನಲ್ಲಿ ಅತಿದೊಡ್ಡ ದರೋಡೆ ಪ್ರಕರಣ ಇದಾಗಿದೆ. ಇದರಿಂದ ಪಡೆದುಕೊಂಡಿದ್ದು, ಗೃಹ ಸಚಿವ ಪರಮೇಶ್ವರ್ ಅವರು ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಹೀಗಾಗಿ ಈ ಪ್ರಕರಣ ತೀವ್ರ ಸ್ವರೂಪ ಪಡೆದುಕೊಂಡಿದ್ದು, ದರೋಡೆಕೋರರ ಹೆಡೆಮುರಿ ಕಟ್ಟಲು ಪೊಲೀಸ್ ಇಲಾಖೆ ಇನ್ನಿಲ್ಲದ ಕಸರತ್ತು ನಡೆಸಿದ್ದು, ಡಿಸಿಪಿ ಲೋಕೇಶ್ ಜಗಲಾಸರ್ ನೇತೃತ್ವದಲ್ಲಿ ತಂಡ ರಚನೆ ಮಾಡಲಾಗಿದ್ದು, ದರೋಡೆಕೋರರ ಪತ್ತೆಗಾಗಿ ಬೆಂಗಳೂರು ನಗರದಾದ್ಯಂತ ನಾಕಾಬಂಧಿ ಹಾಕಲಾಗಿದೆ. ಗಡಿಪ್ರದೇಶದಲ್ಲಿ ಎಲ್ಲಾ ವಾಹನಗಳನ್ನು ತಪಾಸಣೆ ಮಾಡಲಾಗುತ್ತಿದೆ.
ಗೃಹ ಸಚಿವ ಪರಮೇಶ್ವರ್ ಹೇಳಿದ್ದೇನು?
ಪ್ರಕರಣದ ಬಗ್ಗೆ ಗೃಹ ಸಚಿವ ಡಾ.ಜಿ. ಪರಮೇಶ್ವರ್ ಪ್ರತಿಕ್ರಿಯಿಸಿ, ಕಳ್ಳರನ್ನು ನಾವು ಖಂಡಿತಾ ಹಿಡಿಯುತ್ತೇವೆ. ಈಗಲಷ್ಟೇ ಪ್ರಕರಣದ ಲೀಡ್ ಸಿಕ್ಕಿದೆ. ಇದಕ್ಕೆ ಮೂಲ ಕಾರಣ ಯಾರು? ಎಟಿಎಂಗೆ ಹಣ ತಂದು ಹಾಕುವ ಮಾಹಿತಿ ಕೊಟ್ಟಿದ್ದು ಯಾರು? ಹಣ ಹಾಕುವವರಲ್ಲಿ ಯಾರಾದರೂ ಇದ್ದಾರೋ, ಇಲ್ಲವೋ ಅನ್ನೋದು ಗೊತ್ತಿಲ್ಲ. ಈಗಗಷ್ಟೇ ಲೀಡ್ ಸಿಕ್ಕಿದೆ. ಈ ಪ್ರಕರಣವನ್ನು ಗಂಭೀರವಾಗಿ ತೆಗೆದುಕೊಂಡಿದ್ದೇವೆ ಎಂದು ಹೇಳಿದ್ದಾರೆ.