
ಡೈಲಿ ವಾರ್ತೆ: 20/NOV/2025
ಮಂದಾರ್ತಿ ಮೇಳದ ಮಹಿಷಾಸುರ ಪಾತ್ರದಾರಿ ಈಶ್ವರ್ ಗೌಡ, ಬಣ್ಣದಲ್ಲಿದ್ದಾಗಲೇ ಹೃದಯಾಘಾತದಿಂದ ಮೃತ್ಯು

ಕುಂದಾಪುರ: ಮಂದಾರ್ತಿ ಶ್ರೀ ದುರ್ಗಾಪರಮೇಶ್ವರಿ ಯಕ್ಷಗಾನ ಮಂಡಳಿಯ ಎರಡನೇ ಮೇಳದ ಬಣ್ಣದ ವೇಷದಾರಿ ನೆಮ್ಮಾರು ಈಶ್ವರ ಗೌಡ ಅವರು ಬುಧವಾರ ರಾತ್ರಿ ಪ್ರಸಂಗದ ಮಧ್ಯೆಯೇ ಅಸೌಖ್ಯಕ್ಕೊಳಗಾಗಿ ಸಾವನ್ನಪ್ಪಿರುವ ದಾರುಣ ಘಟನೆ ಬೆಳಕಿಗೆ ಬಂದಿದೆ.

ಕುಂದಾಪುರ ತಾಲೂಕು ಸೌಡದಲ್ಲಿ ಆಯೋಜಿಸಲಾಗಿದ್ದ ದೇವಿ ಮಹಾತ್ಮೆ ಯಕ್ಷಗಾನ ಪ್ರಸಂಗದಲ್ಲಿ ಮಹಿಷಾಸುರ ಪಾತ್ರದ ಬಣ್ಣದ ವೇಷಗಾರರಾಗಿ ಅಭಿನಯಿಸುತ್ತಿದ್ದ ವೇಳೆ ಅವರು ಆಕಸ್ಮಿಕವಾಗಿ ತೀವ್ರ ಅಸ್ವಸ್ಥರಾದರು.
ವೇಷ-ಭೂಷಣ ಕಳಚಿ, ಮೇಕಪ್ ಕಳಚವು ವೇಳೆಯೇ ಕೈ ಕಾಲು ತಣ್ಣಗಾಗಿ, ತೀವ್ರ ತೊಂದರೆ ಕಾಣಿಸಿಕೊಂಡಿದ್ದು, ವಾದ್ಯದವರ ಕಾರಿನಲ್ಲಿ ಹಾಲಾಡಿಗೆ ಕರೆತರಲಾಗುವಷ್ಟರಲ್ಲೇ ಅವರು ಕೊನೆಯುಸಿರೆಳೆದಿದ್ದಾರೆ ಎಂದು ಮೂಲಗಳು ತಿಳಿಸಿವೆ.
ಶೃಂಗೇರಿ ಕಿಗ್ಗ ಮೂಲದ ಈಶ್ವರ ಗೌಡರು ಹಲವು ವರ್ಷಗಳಿಂದ ಮಂದಾರ್ತಿ ಮೇಳದ ಪ್ರಮುಖ ಬಣ್ಣದ ವೇಷಗಾರರಾಗಿ ಪ್ರೇಕ್ಷಕರ ಮೆಚ್ಚುಗೆಗೆ ಪಾತ್ರರಾಗಿದ್ದರು.