ಡೈಲಿ ವಾರ್ತೆ: 18/ಜೂ./2024

ಸಂಸತ್ತಿಗೆ ಪ್ರಬಲ ವ್ಯಕ್ತಿ ಬಂದಂತಾಗುತ್ತದೆ: ಪ್ರಿಯಾಂಕ ಗಾಂಧಿ ಸ್ಪರ್ಧೆಗೆ ಶಶಿ ತರೂರ್ ಸಂತಸ

ತಿರುವನಂತಪುರಂ: ಪ್ರಿಯಾಂಕ ಗಾಂಧಿ ಕೇರಳದ ವಯನಾಡ್‌ನಿಂದ ಸ್ಪರ್ಧೆ ಖಚಿತವಾಗುತ್ತಿದ್ದಂತೆ ಹಿರಿಯ ಕಾಂಗ್ರೆಸ್​ ನಾಯಕ, ತಿರುವನಂಪುರಂ ಸಂಸದ ಶಶಿ ತರೂರ್​ಸಂಸತ್ತಿಗೆ ಒಬ್ಬ ಪ್ರಬಲ ವ್ಯಕ್ತಿ ಬಂದಂತಾಗುತ್ತದೆ ಎಂದು ಹರ್ಷ ವ್ಯಕ್ತಪಡಿಸಿದ್ದಾರೆ.

ಪ್ರಿಯಾಂಕ ಗಾಂಧಿ ಅವರು ವಯನಾಡಿನಿಂದ ಲೋಕಸಭೆಗೆ ಆಯ್ಕೆಯಾದರೆ ವಿರೋಧ ಪಕ್ಷದ ಪರ ಮಾತನಾಡಲು ಸಂಸತ್ತಿನಲ್ಲಿ ಒಬ್ಬ ಪ್ರಬಲ ವ್ಯಕ್ತಿ ಬಂದಂತಾಗುತ್ತದೆ. ಲೋಕಸಭೆ ಚುನಾವಣೆಯಲ್ಲಿ ಪ್ರಿಯಾಂಕ ಗಾಂಧಿ ಅವರು ಅತ್ಯಂತ ಪರಿಣಾಮಕಾರಿ ವಾಗ್ಮಿಯಾಗಿದ್ದರು ಮತ್ತು ಅವರು ಕೇರಳದಿಂದ ಚುನಾವಣಾ ರಾಜಕೀಯ ಪ್ರವೇಶಿಸುತ್ತಿರುವುದು ಅತ್ಯಂತ ಸಂತಸದ ವಿಚಾರವಾಗಿದೆ ಎಂದಿದ್ದಾರೆ.

ರಾಹುಲ್​ ಗಾಂಧಿ ಅವರು ರಾಯ್​ಬರೇಲಿಯನ್ನು ಉಳಿಸಿಕೊಳ್ಳುವ ಮೂಲಕ ವಯನಾಡನ್ನು ತಮ್ಮ ಸಹೋದರಿಗೆ ಹಸ್ತಾಂತರಿಸುವುದು ಉತ್ತಮ ನಡೆಯಾಗಿದೆ. ನನ್ನ ಪ್ರಕಾರ ಪ್ರಿಯಾಂಕ ಗಾಂಧಿ ಅವರು ವಾರಣಾಸಿ ಸ್ಪರ್ಧಿಸಿದ್ದರೆ ಇನ್ನೂ ರೋಚಕವಾಗಿರುತ್ತಿತ್ತು. ಇತ್ತೀಚಿನ ವರ್ಷಗಳಲ್ಲಿ ಅವರು ಮಾತನಾಡುತ್ತಿರುವ ರೀತಿ ಜನರ ಮೇಲೆ ಪರಿಣಾಮ ಬೀರುತ್ತಿದ್ದು, ಇದು ಕಾಂಗ್ರೆಸ್​ಗೆ ಹೆಚ್ಚು ಸಹಕಾರಿಯಾಗುತ್ತಿದೆ ಎಂದು ಶಶಿ ತರೂರ್​ ಅಭಿಪ್ರಾಯಪಟ್ಟಿದ್ದಾರೆ.