ಡೈಲಿ ವಾರ್ತೆ: 24/ಜೂ./2024

ಅಬ್ಬಿಫಾಲ್ಸ್ ನಲ್ಲಿ ನೀರುಪಾಲದ ಬೆಂಗಳೂರು ಪ್ರವಾಸಿಗನ ಶವ ಪತ್ತೆ.

ಹೊಸನಗರ: ಶಿವಮೊಗ್ಗ ಜಿಲ್ಲೆಯ ಯಡೂರು ಅಬ್ಬಿಫಾಲ್ಸ್ ನೋಡಲು ಬಂದ ಬೆಂಗಳೂರು ಪ್ರವಾಸಿಗ ನೋರ್ವ ನೀರುಪಾಲಾದ ಘಟನೆ ಭಾನುವಾರ ನಡೆದಿದ್ದು ಇಂದು (ಸೋಮವಾರ) ಶವ ಪತ್ತೆಯಾಗಿದೆ.

ಮೃತಪಟ್ಟ ಯುವಕ ಬಳ್ಳಾರಿ ನಿವಾಸಿ ವಿನೋದ್ (26) ಎಂದು ಗುರುತಿಸಲಾಗಿದೆ.


ಈತ ಬೆಂಗಳೂರು ಬಸವನಗುಡಿಯ ಖಾಸಗಿ ಕಂಪನಿಯಲ್ಲಿ ಸಾಫ್ಟ್ ವೇರ್ ಕೆಲಸ ಮಾಡುತ್ತಿದ್ದ. ಇವರು 12 ಜನರ ತಂಡದೊಂದಿಗೆ ಆಗಮಿಸಿ, ಕೊಡಚಾದ್ರಿಯಿಂದ ಅಬ್ಬೆ ಫಾಲ್ಸ್ಗೆ ತೆರಳಿದ್ದರು. ಇದೇ ವೇಳೆ ಭಾನುವಾರ ಮಧ್ಯಾಹ್ನ 3 ಗಂಟೆ ಸುಮಾರಿಗೆ ಫಾಲ್ಸ್‌ ಬಳಿ ತೆರಳಿದ್ದಾಗ ಕಾಲು ಜಾರಿ ಬಿದ್ದಿದ್ದಾನೆ.

ನಾಪತ್ತೆಯಾಗಿರುವ ವಿನೋದನಿಗಾಗಿ ಅಗ್ನಿಶಾಮಕ ದಳ ಹಾಗೂ ನಗರ ಠಾಣೆ ಪೊಲೀಸರು ಹುಡುಕಾಟ ನಡೆಸಿದರು. ಆದರೆ ಶವ ಪತ್ತೆಯಾಗದ ಕಾರಣ (ಇಂದು) ಸೋಮವಾರ ಬೆಳಿಗ್ಗೆ ಈಶ್ವರ್ ಮಲ್ಪೆ ಮತ್ತು ಅವರ ತಂಡ ಹಾಗೂ ಕೋಟ ಜೀವನ್ ಮಿತ್ರ ನಾಗರಾಜ್ ಪುತ್ರನ್ ಮತ್ತು ಸ್ಥಳೀಯರ ಕಾರ್ಯಾಚರಣೆಯಿಂದ ಮೃತದೇಹವನ್ನು ಪತ್ತೆ ಹಚ್ಚಲಾಯಿತು.

ಶವವನ್ನು ಮರಣೋತ್ತರ ಪರೀಕ್ಷೆಗೆ ಸಾಗಿಸಲಾಗಿದೆ.
ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.