ಡೈಲಿ ವಾರ್ತೆ: 26/ಜೂ./2024
ಬಂಟ್ವಾಳ ತಾಲೂಕಿನ ವಿವಿಧೆಡೆ ಮನೆ, ಕೃಷಿ ಹಾಗೂ ಗುಡ್ಡೆ ಜರಿತದಿಂದಾಗಿ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿ
ಬಂಟ್ವಾಳ : ಕರಾವಳಿ ಭಾಗದಲ್ಲಿ ಕಳೆದ ಕೆಲವು ದಿನಗಳಿಂದ ಜೋರಾಗಿ ಮಳೆಯಾಗುತ್ತಿದ್ದು ತಾಲೂಕಿನ ವಿವಿಧೆಡೆ ಮನೆ, ಕೃಷಿ ಹಾಗೂ ಗುಡ್ಡೆ ಜರಿತದಿಂದಾಗಿ ಸಾರ್ವಜನಿಕ ಆಸ್ತಿಪಾಸ್ತಿಗಳಿಗೆ ಹಾನಿಯಾಗಿದೆ.
ಕೆದಿಲ ಗ್ರಾಮದ ಗಾಂದಿ ನಗರ ನಿವಾಸಿ ಪೂವಕ್ಕ ಅವರ ವಾಸ್ತವ್ಯದ ಮನೆ ಮೇಲೆ ಮರ ಬಿದ್ದು ಹಂಚುಗಳ ಜೊತೆ ಸಿಮೆಂಟ್ ಸೀಟುಗಳನ್ನು ಜಖಂಗೊಂಡಿದೆ.
ನೆಟ್ಲ ನಿಟಿಲೇಶ್ವರ ದೇವಾಲಯದ ಬಳಿಯ ಮನೆಯ ಕಂಪೌಂಡ್ ಗೆ ಮರಬಿದ್ದು ಹಾನಿಯಾಗಿದೆ.
ಗೋಳ್ತಮಜಲು ಗ್ರಾಮದ ನೆಟ್ಲ ಧನಂಜಯ ಗಟ್ಟಿಯವರ ವಾಸ್ತವ್ಯದ ಮನೆ ಮೇಲೆ ಮರ ಬಿದ್ದು ಭಾಗಶಃ ಹಾನಿಯಾಗಿದ್ದಲ್ಲದೆ ಮನೆಯ ಕಂಪೌಂಡ್ ಗೂ ಹಾನಿಯಾಗಿದೆ.
ನರಿಕೊಂಬು ಗ್ರಾಮದ ಮಾಣಿಮಜಲು ಎಂಬಲ್ಲಿ ರಾಮಚಂದ್ರ ಗೌಡ ಎಂಬವರ ಮನೆಯ ಸಮೀಪದ ಗುಡ್ಡದ ಮಣ್ಣು ಜರಿದು ಶೌಚಾಲಯದ ಪಿಟ್ ಗುಂಡಿಯ ಮೇಲೆ ಮಣ್ಣು ಬಿದ್ದು ಹಾನಿಯಾಗಿದೆ.
ನರಿಕೊಂಬು ಗ್ರಾಮದ ಮರ್ಲಿಮಾರು ಎಂಬಲ್ಲಿ ಭತ್ತದ ಗದ್ದೆಯಲ್ಲಿ ನೀರು ಶೇಖರಣೆಯಾಗಿ ಕೃಷಿಗೆ ಹಾನಿಯಾಗಿದೆ.
ಇನ್ನೂ ಅನೇಕ ಕಡೆಗಳಲ್ಲಿ ಹಾನಿಯುಂಟಾಗಿರುವ ಸಾಧ್ಯತೆಗಳಿದ್ದು,ಇನ್ನಷ್ಟೇ ವರದಿಯಾಗಬೇಕಿದೆ.
ಮಾಹಿತಿ ತಿಳಿದ ಎಲ್ಲಾ ಕಡೆಗಳಿಗೆ ಸಂಬಂಧಪಟ್ಟ ತಾಲೂಕಿನ ಅಧಿಕಾರಿಗಳು ಬೇಟಿ ನೀಡಿ ಪರಿಶೀಲನೆ ನಡೆಸಿ ಪರಿಹಾರ ಕಾರ್ಯಕ್ಕೆ ಸೂಚನೆ ನೀಡಿದ್ದಾರೆ.