ಡೈಲಿ ವಾರ್ತೆ: 02/ಜುಲೈ /2024

ಕೃಷ್ಣಾ ನದಿಯಲ್ಲಿ ತೆಪ್ಪ ಮಗುಚಿ 6 ಮಂದಿ ನೀರುಪಾಲು: ಓರ್ವನ ಮೃತದೇಹ ಪತ್ತೆ

ವಿಜಯಪುರ: ಕೃಷ್ಣಾ ನದಿಯಲ್ಲಿ ತೆಪ್ಪ ಮುಗುಚಿ ಆರು ಮಂದಿ ನೀರುಪಾಲಾಗಿರುವ ದುರ್ಘಟನೆ ವಿಜಯಪುರ ಜಿಲ್ಲೆಯಲ್ಲಿ ಮಂಗಳವಾರ ಸಂಜೆ ನಡೆದಿದೆ. ಕಾರ್ಯಾಚರಣೆ ವೇಳೆ ಓರ್ವನ ಮೃತದೇಹ ಪತ್ತೆಯಾಗಿದೆ.

ಮೃತ ವ್ಯಕ್ತಿ ಪುಂಡಲೀಕ ಎನ್ ಕಂಚಿ (35) ಎಂದು ಗುರುತಿಸಲಾಗಿದೆ.

ಕೃಷ್ಣಾ ನದಿಯ ಬಳೂತಿ ಏತ ನೀರಾವರಿ ಜಾಕವೆಲ್ ಬಳಿ ಜೂಜುಕೋರರ ಗುಂಪು ಇಸ್ಪೀಟ್ ಆಟದಲ್ಲಿ ಮಗ್ನವಾಗಿತ್ತು. ಈ ವೇಳೆ ಜೂಜು ಅಡ್ಡೆ ಮೇಲೆ ಪೊಲೀಸರು ದಾಳಿಗೆ ಮುಂದಾಗಿದ್ದಾರೆ ಎಂಬ ಮಾಹಿತಿ ತಿಳಿದು ಪೊಲೀಸರಿಂದ ತಪ್ಪಿಸಿಕೊಳ್ಳಲು ಮುಂದಾಗಿ ಪಕ್ಕದಲ್ಲಿದ್ದ ಮೀನುಗಾರರ ತೆಪ್ಪದಲ್ಲಿ ನದಿಯಲ್ಲಿ ಹೊರಟಿದ್ದಾರೆ. ಈ ವೇಳೆ ಸಾಮರ್ಥ್ಯಕ್ಕಿಂತ ಹೆಚ್ಚಿನ ಜನರು ಕುಳಿತಿದ್ದ ತೆಪ್ಪ ಬಿರುಗಾಳಿಗೆ ತುಂಬಿ ಹರಿಯುವ ನದಿಯಲ್ಲಿ ಮಗುಚಿ ಬಿದ್ದಿದೆ. ಪರಿಣಾಮ ತೆಪ್ಪದಲ್ಲಿದ್ದವರು ನೀರು ಪಾಲಾಗಿದ್ದಾರೆ.

ಇದರಲ್ಲಿ ಇಬ್ಬರು ಈಜಿಕೊಂಡು ದಡ ಸೇರಿದ್ದರೆ, ಓರ್ವ ಶವವಾಗಿ ಪತ್ತೆಯಾಗಿದ್ದಾರೆ. ಘಟನೆಯಲ್ಲಿ ನದಿಯಲ್ಲಿ ಮುಳುಗಿದವರು ಎಷ್ಟು ಜನ ಎಂಬುದು ನಿಖರವಾಗಿಲ್ಲ, ಪೊಲೀಸರೂ ಇದನ್ನು ಸ್ಪಷ್ಟಪಡಿಸಿಲ್ಲ. ಆದರೆ ಕನಿಷ್ಠ ಆರು ಜನ ಹರಿಯುವ ನದಿಯಲ್ಲಿ ನಾಪತ್ತೆಯಾಗಿದ್ದಾರೆ ಎಂದು ಶಂಕಿಸಲಾಗಿದೆ.
ಕೊಲ್ಹಾರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದ್ದು, ಎಸ್ಪಿ ಋಷಿಕೇಶ ಭಗವಾನ್, ಎಎಸ್ಪಿ ಶಂಕರ ಮಾರಿಹಾಳ ಸೇರಿದಂತೆ ಹಿರಿಯ ಪೊಲೀಸ ಅಧಿಕಾರಿಗಳು ಸ್ಥಳಕ್ಕೆ ದೌಡಾಯಿಸಿದ್ದಾರೆ.