ಡೈಲಿ ವಾರ್ತೆ: 03/ಜುಲೈ /2024

ಹತ್ರಾಸ್ ಕಾಲ್ತುಳಿತ; ಹೆಣಗಳ ರಾಶಿ ನೋಡಿ ಹೃದಯಾಘಾತದಿಂದ ಪೊಲೀಸ್ ಸಾವು!

ಹತ್ರಾಸ್: ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯ ಫುಲ್ರೈ ಗ್ರಾಮದಲ್ಲಿ ಇಂದು ನಡೆದ ಸತ್ಸಂಗದಲ್ಲಿ ಕಾಲ್ತುಳಿತ ಉಂಟಾಗಿ 116 ಜನರು ಸಾವನ್ನಪ್ಪಿದ್ದಾರೆ. ಸಾವಿನ ಸಂಖ್ಯೆ ಹೆಚ್ಚಾಗುವ ಆತಂಕವಿದೆ. ಆಸ್ಪತ್ರೆಯಲ್ಲಿ ಭದ್ರತಾ ಡ್ಯೂಟಿಗೆ ನಿಯೋಜನೆಯಾಗಿದ್ದ ರಜನೀಶ್ ಎಂಬ ಪೋಲೀಸ್ ಇಟಾಹ್ ಜಿಲ್ಲಾ ಆಸ್ಪತ್ರೆಯಲ್ಲಿ ಬಿದ್ದಿದ್ದ ಹೆಣಗಳ ರಾಶಿಯನ್ನು ನೋಡಿದ ನಂತರ ತೀವ್ರ ಹೃದಯಾಘಾತಕ್ಕೆ ಒಳಗಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ.

ಇಟಾಹ್ ಮೆಡಿಕಲ್ ಕಾಲೇಜಿನಲ್ಲಿ ತುರ್ತು ಕರ್ತವ್ಯದಲ್ಲಿದ್ದ ಪೊಲೀಸ್ ರಜನೀಶ್ ಮೃತದೇಹಗಳ ರಾಶಿಯನ್ನು ನೋಡಿ ಹೃದಯಾಘಾತಕ್ಕೆ ಒಳಗಾಗಿದ್ದರು. ಅವರು ಅವಘರ್‌ನಲ್ಲಿ ಕ್ವಿಕ್ ರೆಸ್ಪಾನ್ಸ್ ಟೀಮ್ (ಕ್ಯೂಆರ್‌ಟಿ) ಭಾಗವಾಗಿದ್ದರು. ತುರ್ತು ಕರ್ತವ್ಯಕ್ಕಾಗಿ ಅವರನ್ನು ಆಸ್ಪತ್ರೆಗೆ ಕರೆಸಲಾಗಿತ್ತು. ಆದರೆ, ಅಲ್ಲಿ ಬಿದ್ದಿದ್ದ ಹೆಣಗಳು ಮತ್ತು ಗೋಳಾಡುತ್ತಿದ್ದ ಸಾವಿರಾರು ಜನರನ್ನು ನೋಡಿ ಹೃದಯಾಘಾತಕ್ಕೊಳಗಾಗಿ ಅವರು ಮೃತಪಟ್ಟಿದ್ದಾರೆ.

ಹತ್ರಾಸ್ ದುರಂತಕ್ಕೆ ರಾಷ್ಟ್ರಪತಿ ದ್ರೌಪದಿ ಮುರ್ಮು, ಪ್ರಧಾನಿ ನರೇಂದ್ರ ಮೋದಿ, ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಸೇರಿದಂತೆ ಹಲವರು ಸಂತಾಪ ಸೂಚಿಸಿದ್ದಾರೆ. ಉತ್ತರ ಪ್ರದೇಶದ ಹತ್ರಾಸ್ ಜಿಲ್ಲೆಯಲ್ಲಿ ಅಪಘಾತದಲ್ಲಿ ಮಹಿಳೆಯರು ಮತ್ತು ಮಕ್ಕಳು ಸೇರಿದಂತೆ ಅನೇಕ ಭಕ್ತರ ಸಾವಿನ ಸುದ್ದಿ ಹೃದಯ ವಿದ್ರಾವಕವಾಗಿದೆ. ಅವರ ಕುಟುಂಬ ಸದಸ್ಯರನ್ನು ಕಳೆದುಕೊಂಡವರಿಗೆ ನನ್ನ ಸಂತಾಪವನ್ನು ವ್ಯಕ್ತಪಡಿಸುತ್ತೇನೆ ಮತ್ತು ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲು ಪ್ರಾರ್ಥಿಸುತ್ತೇನೆ ಎಂದು ಎಕ್ಸ್​ನಲ್ಲಿ ರಾಷ್ಟ್ರಪತಿ ದ್ರೌಪದಿ ಮುರ್ಮು ಪೋಸ್ಟ್ ಮಾಡಿದ್ದಾರೆ.