ಡೈಲಿ ವಾರ್ತೆ: 03/ಜುಲೈ /2024

ಮಂಗಳೂರು: ನಿರ್ಮಾಣ ಹಂತದ ಕಟ್ಟಡದ ಬಳಿ ಭೂಕುಸಿತ – ಮಣ್ಣಿನಡಿ ಸಿಲುಕಿದ ಕಾರ್ಮಿಕರು

ಮಂಗಳೂರು: ನಗರದ ಬಲ್ಮಠ ಬಳಿ ನಿರ್ಮಾಣ ಹಂತದ ಕಟ್ಟಡದ ಬಳಿ ಭೂಕುಸಿತ ಸಂಭವಿಸಿ ಕಾರ್ಮಿಕರು ಮಣ್ಣಿನಡಿ ಸಿಲುಕಿದ ಘಟನೆ ಬುಧವಾರ ನಡೆದಿದೆ.

ಸ್ಥಳಕ್ಕೆ ಅಧಿಕಾರಿಗಳು, ಅಗ್ನಿಶಾಮಕ ದಳ , ಎಸ್ ಡಿ ಆರ್ ಎಫ್, ಎನ್ ಡಿ ಆರ್ ಎಫ್ , ಎಸ್ ಡಿಆರ್ ಎಫ್ ಪಡೆಗಳು ದೌಡಾಯಿಸಿದ್ದು, ರಕ್ಷಣ ಕಾರ್ಯ ನಡೆಯುತ್ತಿದೆ. ಇಬ್ಬರು ಕಾರ್ಮಿಕರು ಅವಶೇಷಗಳ ಅಡಿ ಸಿಲುಕಿರುವ ಸಾಧ್ಯತೆ ಇದೆ ಎಂದು ಹೇಳಲಾಗಿದೆ.
ಬಲ್ಮಠ ರಸ್ತೆ ಬದಿಯಲ್ಲಿ ಖಾಸಗಿ ನಿರ್ಮಾಣಕ್ಕೆ ಸಂಸ್ಥೆಗೆ ಸೇರಿದ ಜಾಗ ಇದಾಗಿದೆ.

ರಿಟೇನಿಂಗ್ ವಾಲ್ ಹಾಗೂ ಹಾಕಲಾದ ಶೀಟ್‌ಗಳ ಮೇಲೆ ಮಣ್ಣು ಬಿದ್ದಿದ್ದು, ಸಿಲುಕಿರುವ ಕಾರ್ಮಿಕರು ಮಾತನಾಡುತ್ತಿದ್ದಾರೆ. ಸದ್ಯ ರಿಟೇನಿಂಗ್ ವಾಲ್ ಹಾಗೂ ಶೀಟ್ ಮಧ್ಯೆ ಕಾರ್ಮಿಕರು ಸಿಲುಕಿದ್ದಾರೆ. ಕೋರ್ ಕಟ್ಟಿಂಗ್ ಮೂಲಕ ರಕ್ಷಣ ಕಾರ್ಯ ನಡೆಸಲಾಗುತ್ತಿದೆ.
ಮಣ್ಣಿನಡಿ ಸಿಲುಕಿರುವ ಇಬ್ಬರು ಕಾರ್ಮಿಕರ ರಕ್ಷಣ ಕಾರ್ಯಾಚರಣೆ ಸಮರೋಪಾದಿಯಲ್ಲಿ ನಡೆಯುತ್ತಿದೆ. ಜಿಲ್ಲಾಧಿಕಾರಿ, ಪೊಲೀಸ್ ಆಯುಕ್ತರು ಸೇರಿದಂತೆ ಅಧಿಕಾರಿಗಳು ಸ್ಥಳದಲ್ಲಿದ್ದಾರೆ.

ಸುಮಾರು 60 ಮಂದಿ ಕೆಲಸ ಮಾಡುತ್ತಿದ್ದರು. ಅದರಲ್ಲಿ ಇಬ್ಬರು ಸಿಲುಕಿದ್ದಾರೆ. ಕಬ್ಬಿಣದ ಫ್ರೇಮ್ ಒಳಗೆ ಇರುವುದರಿಂದ ಸದ್ಯ ಪ್ರಾಣಾಪಾಯ ಇಲ್ಲ ಎನ್ನಲಾಗಿದೆ. ಇಬ್ಬರಿಗೂ ಕುಡಿಯಲು ನೀರು ಪೂರೈಸಲಾಗಿದೆ.