ಡೈಲಿ ವಾರ್ತೆ: 07/ಜುಲೈ /2024

ಬಂಟ್ವಾಳ: ಸ್ಕೂಟರ್ ಗೆ ಗೂಡ್ಸ್ ಮಿನಿಲಾರಿ ಡಿಕ್ಕಿ – ಸವಾರ ಮೃತ್ಯು, ಸಹಸವಾರ ಗಂಭೀರ.!

ಬಂಟ್ವಾಳ : ಗೂಡ್ಸ್ ಮಿನಿಲಾರಿ ಹಾಗೂ ಸ್ಕೂಟರ್ ನಡುವೆ ನಡೆದ ಅಪಘಾತದಲ್ಲಿ ಸ್ಕೂಟರ್ ಸವಾರ ಸಾವನ್ನಪ್ಪಿದ್ದು, ಸಹಸವಾರ ಗಂಭೀರ ಗಾಯಗೊಂಡ ಘಟನೆ ಬಂಟ್ವಾಳ – ಪುಂಜಾಲಕಟ್ಟೆ ರಾಷ್ಟ್ರೀಯ ಹೆದ್ದಾರಿಯ ಕಾವಳಪಡೂರು ಗ್ರಾಮದ ವಗ್ಗದಲ್ಲಿ ಶನಿವಾರ ಸಂಜೆ ಸಂಭವಿಸಿದೆ.

ಕಾಸರಗೋಡು ಸಮೀಪದ ಬೇಕಲ ನಿವಾಸಿ ಸುಮಿತ್ (24) ಮೃತಪಟ್ಟ‌ವರು. ಸ್ಕೂಟರ್‌ ಸಹಸವಾರ ಗುರುಪ್ರೀತ್ ಗಂಭೀರ ಗಾಯಗೊಂಡಿದ್ದು, ಮಂಗಳೂರಿನ ಆಸ್ಪತ್ರೆಯೊಂದಕ್ಕೆ ದಾಖಲಿಸಲಾಗಿದೆ.

ಪುಂಜಾಲಕಟ್ಟೆ ಕಡೆಯಿಂದ ಮಂಗಳೂರು ಕಡೆಗೆ ಸಾಗುತ್ತಿದ್ದ ಸ್ಕೂಟರ್ ಗೆ ಎದುರು ಕಡೆಯಿಂದ ಬರುತ್ತಿದ್ದ ಮಿನಿಲಾರಿ ಢಿಕ್ಕಿಯಾಗಿದೆ. ಪಿಕಪ್ ವಾಹನವೊಂದನ್ನು ಹಿಂದಿಕ್ಕುವ ಭರದಲ್ಲಿ ಮಿನಿಲಾರಿ ಸ್ಕೂಟರ್‌ಗೆ ಢಿಕ್ಕಿಯಾಗಿದೆ ಎಂದು ತಿಳಿದು ಬಂದಿದೆ. ಅಪಘಾತದ ತೀವ್ರತೆಗೆ ಸುಮಿತ್ ಅವರ ತಲೆಗೆ ಗಂಭೀರ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದ್ದಾರೆ . ಗಾಯಾಳು ಗುರುಪ್ರೀತ್ ಅವರನ್ನು ಸ್ಥಳೀಯರು ಮಂಗಳೂರು ಆಸ್ಪತ್ರೆಗೆ ಸಾಗಿಸಿದ್ದಾರೆ. ಬಂಟ್ವಾಳ ಸಂಚಾರಿ ಪೊಲೀಸರು ಸ್ಥಳಕ್ಕೆ ತೆರಳಿದ್ದು, ನಾರಾಯಣ ಶೆಟ್ಟಿ ಅವರು ನೀಡಿದ ದೂರಿನಂತೆ ಪ್ರಕರಣ ದಾಖಲಿಸಿಕೊಂಡಿದ್ದಾರೆ .