ಡೈಲಿ ವಾರ್ತೆ: 07/ಜುಲೈ /2024

ಉಳ್ಳಾಲ: ಚಿನ್ನಾಭರಣ ಕಳವು ಪ್ರಕರಣ – ಇಬ್ಬರು ಅಪ್ರಾಪ್ತ ಬಾಲಕರು ಸೇರಿ ಐದು ಮಂದಿ ಬಂಧನ

ಮಂಗಳೂರು: ಮನೆಯ ಕಪಾಟಿನಲ್ಲಿದ್ದ ಹದಿನೈದು ಲಕ್ಷಕ್ಕೂ ಅಧಿಕ ಮೌಲ್ಯದ ಚಿನ್ನಾಭರಣ ಕಳವು ಮಾಡಿದ ಘಟನೆ ಉಳ್ಳಾಲ ಠಾಣೆ ವ್ಯಾಪ್ತಿಯ ಧರ್ಮನಗರದಲ್ಲಿ ನಡೆದಿದ್ದು, ಪ್ರಕರಣಕ್ಕೆ ಸಂಬಂಧಿಸಿ ಪೊಲೀಸರು ಇಬ್ಬರು ಬಾಲಕರು ಸೇರಿ ಐದು ಮಂದಿಯನ್ನು ಬಂಧಿಸಿದ್ದಾರೆ.

ಇಬ್ಬರು ಬಾಲಕರು ಸೇರಿದಂತೆ ಆರೋಪಿಗಳಾದ ಶ್ರೇಯಸ್ಸ್ ಬೆಳ್ತಂಗಡಿ, ಪೃಥ್ವಿರಾಜ್ ಉರ್ವ ಮತ್ತು ತೌಸೀಫ್ ಬೆಳ್ತಂಗಡಿ ಎಂಬವರನ್ನು ವಶಕ್ಕೆ ಪಡೆದು ತನಿಖೆ ನಡೆಸಿದ್ದು, ಈ ಸಂದರ್ಭ ಅವರು ಚಿನ್ನಾಭರಣ ಕಳವುಗೈದು ಅಂಗಡಿಗಳಿಗೆ ಮಾರಾಟ ಮಾಡಿದ್ದು ಬೆಳಕಿಗೆ ಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಧರ್ಮನಗರ ನಿವಾಸಿ ಶ್ರೀಧರ್ ಎಂಬವರ ಮನೆಯಲ್ಲಿ ಜೂನ್ 8ರ ಬೆಳಗ್ಗೆ 8 ಗಂಟೆಯಿಂದ ಜೂ.16ರ ಮಧ್ಯಾಹ್ನ 12 ಗಂಟೆಯ ನಡುವೆ ಚಿನ್ನಾಭರಣ ಕಳವಾಗಿತ್ತು. ಈ ಬಗ್ಗೆ ಉಳ್ಳಾಲ ಠಾಣೆಗೆ ಶ್ರೀಧರ್ ದೂರು ನೀಡಿದ್ದರು. ಮನೆಯ ಬೆಡ್ ರೂಮಿನ ಕಪಾಟಿನಲ್ಲಿರಿಸಿದ್ದ ಚಿನ್ನದ ಕರಿಮಣಿ ಸರ, ನೆಕ್ಲೇಸ್, ಚೈನ್, ಬ್ರಾಸ್ ಲೈಟ್, ಉಂಗುರಗಳು, ಕಿವಿ ಓಲೆಗಳು, ಕೈಬಳೆಗಳು ಸೇರಿದಂತೆ
ಅಂದಾಜು 15 ಲಕ್ಷಕ್ಕೂ ಹೆಚ್ಚು ಮೌಲ್ಯದ 32 ಪವನ್ ಗಿಂತಲೂ ಹೆಚ್ಚು ತೂಕದ ಚಿನ್ನದ ಆಭರಣಗಳನ್ನು ಕಳವುಗೈದ ಬಗ್ಗೆ ದೂರಿನಲ್ಲಿ ತಿಳಿಸಿದ್ದರು. ಈ ಬಗ್ಗೆ ಉಳ್ಳಾಲ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.