ಡೈಲಿ ವಾರ್ತೆ: 12/ಜುಲೈ /2024

ಕುಂದಾಪುರ: ಕೋಡಿ ಜನತೆಗೆ ಕತ್ತಲೆ ಭಾಗ್ಯ – ಮೆಸ್ಕಾಂ ಬಗ್ಗೆ ಜನಾಕ್ರೋಶ, ಲೈನ್ ಮ್ಯಾನ್ ಪಂಜು ಇವರ ಕರ್ತವ್ಯ ಲೋಪದ ಬಗ್ಗೆ ದೂರು

ಕುಂದಾಪುರ: ಕುಂದಾಪುರ ಪುರಸಭೆ ವ್ಯಾಪ್ತಿಯ, ನಗರದ ಹೊರ ವಲಯದ ಕೋಡಿಯಲ್ಲಿ ಅಸಮರ್ಪಕ ವಿದ್ಯುತ್ ಹಾಗೂ ಲೈನ್ ಮ್ಯಾನ್ ಪಂಜು ಇವರ ಕರ್ತವ್ಯ ಲೋಪದ ಬಗ್ಗೆ ಕುಂದಾಪುರ ಸಹಾಯಕ ಕಾರ್ಯನಿರ್ವಾಹಕ ಇಂಜಿನಿಯರ್ ವಿಜಯಕುಮಾರ್ ಅವರಿಗೆ ಜು. 12 ರಂದು ಕೋಡಿಯ ಪರಿಸರದ ಸಾರ್ವಜನಿಕರು ದೂರು ನೀಡಿದ್ದಾರೆ.

ಕಡಲ ತಡಿಯಲ್ಲಿರುವ ಕೋಡಿ ಪರಿಸರದಲ್ಲಿ ಸಾವಿರಾರು ಮನೆಗಳಿದ್ದು, ಕಳೆದ ಹಲವು ದಿನಗಳಿಂದ ಅನಿಯಮಿತವಾಗಿ ವಿದ್ಯುತ್ ಸಂಪರ್ಕ ಸ್ಥಗಿತಗೊಳ್ಳುತ್ತಿದೆ. ಈ ಬಗ್ಗೆ ಮೆಸ್ಕಾಂ ಅನ್ನು ಸಂಪರ್ಕಿಸಿದರೆ ಯಾವುದೇ ಸ್ಪಂದನೆ ನೀಡುತ್ತಿಲ್ಲ ಎಂದು ಆ ಭಾಗದ ಜನರು ಆಕ್ರೋಶಗೊಂಡಿದ್ದಾರೆ.
ಮೆಸ್ಕಾಂ ನವರ ಈ ಉಪದ್ರ ಸಾಲದೆಂಬಂತೆ ಈ ಪ್ರದೇಶದಲ್ಲಿ ಕರ್ತವ್ಯ ನಿರ್ವಹಿಸುತ್ತಿರುವ ಲೈನ್ ಮ್ಯಾನ್ ಪಂಜು ಎನ್ನುವವರು ಕೂಡಾ ಉಡಾಫೆಯ ಪ್ರವೃತ್ತಿ ಹೊಂದಿರುವುದು ಜನರ ಸಂಕಷ್ಟವನ್ನು ಹೆಚ್ಚಿಸಿದೆ. ಯಾವುದೇ ವಿಷಯದಲ್ಲಿ ವಿನಂತಿಸಿದರೂ ಇವರು ಉಡಾಫೆಯಾಗಿ ಮಾತನಾಡುತ್ತಾರೆ. ಸಾರ್ವಜನಿಕರಿಗೆ ಸರಿಯಾದ ಸ್ಪಂದನೆ ನೀಡುತ್ತಿಲ್ಲ. ಈ ಎಲ್ಲ ವಿಷಯಗಳು ಮತ್ತು ಮೆಸ್ಕಾಂ ಅಧಿಕಾರಿಗಳ ನಿರ್ಲಕ್ಷ್ಯದಿಂದ ವಿದ್ಯುತ್ ಬಳಕೆದಾರರಿಗೆ ಆಗುತ್ತಿರುವ ತೊಂದರೆಗಳ ಬಗ್ಗೆ ಸಾರ್ವಜನಿಕರ ಪರವಾಗಿ ಕೋಡಿ ಭಾಗದ ನಿವಾಸಿಗಳಾದ ಪುರಸಭೆ ಸದಸ್ಯ ಆಷ್ಪಾಕ್ ಕೋಡಿ, ಸಮಾಜ ಸೇವಕ ಅಬ್ಬಾಸ್ ಕೋಡಿ, ಹಾಗೂ ಇಬ್ರಾಹಿಂ ಕೋಡಿ ಇವರಗಳು
ಮೆಸ್ಕಾಂ ವರಿಷ್ಟಾಧಿಕಾರಿಗಳಿಗೆ ದೂರು ಸಲ್ಲಿಸಿದ್ದಾರೆ.
ಈ ಎಲ್ಲ ತೊಂದರೆಗಳನ್ನೂ ಶೀಘ್ರ ಪರಿಹರಿಸುವಂತೆ ದೂರಿನಲ್ಲಿ ಮನವಿ ಮಾಡಲಾಗಿದೆ.

ಸಾರ್ವಜನಿಕರ ಮನೆಗಳಿಗೆ ವಿದ್ಯುತ್ ಸಂಪರ್ಕ ನೀಡುವುದು ಸಂಬಂಧಿತ ಇಲಾಖೆಯ ಜವಾಬ್ದಾರಿಯಾಗಿದೆ. ಬಳಕೆದಾರರ ಕಾನೂನಿನಲ್ಲಿ ಈ ಅಂಶವನ್ನು ಉಲ್ಲೇಖಸಲಾಗಿದೆ.

ಕೋಡಿಯಲ್ಲಿ ಇತ್ತೀಚಿಗೆ ವಿದ್ಯುತ್ ಸಂಪರ್ಕದ ತಂತಿಗಳ ಬದಲಿಗೆ ಕೇಬಲ್ ಅಳವಡಿಸಲಾಗಿದೆ. ಈ ನಂತರ ವಿದ್ಯುತ್ ಸಮಸ್ಯೆಗಳು ಹೆಚ್ಚಾಗಿವೆ ಎನ್ನಲಾಗಿದೆ. ಸಮುದ್ರದ ದಂಡೆಯ ಮೇಲೇ ಇರುವ ಪ್ರದೇಶ ಕೋಡಿ ಆದ್ದರಿಂದ ಇಲ್ಲಿ ಯಾವಾಗಲೂ ಸಮುದ್ರದ ಮೇಲ್ಮೈ ಗಾಳಿ ಜೋರಾಗಿರುತ್ತದೆ. ಈಗ ಮಾನ್ಸೂನ್ ಮಾರುತವೂ ಬಲವಾಗಿದೆ. ಇಂತಹ ಪರಿಸ್ಥಿತಿಯಲ್ಲಿ ವಿದ್ಯುತ್ ಸಂಪರ್ಕ ತಂತಿಗಳು ಸರಿಯಾಗಿರದೆ ವಿದ್ಯುತ್ ಕಣ್ಣಾಮುಚ್ಚಾಲೆಯಾಡಿದರೆ ಜನರ ಸಂಕಷ್ಟ ಹೇಳತೀರದು. ಹಗಲಿರಲಿ, ನಡುರಾತ್ರಿಯೆ ಇರಲಿ ವಿದ್ಯುತ್ ಹಠಾತ್ತನೇ ಸ್ಥಗಿತಗೊಳ್ಳುತ್ತದೆ. ಮೆಸ್ಕಾಂ ಗೆ ಕರೆ ಮಾಡಿದರೆ ಸ್ಪಂದನೆಯೇ ಇಲ್ಲ. ಇದು ಕಳ್ಳರಿಗೂ ವರದಾನವಾಗಿದೆ. ಶಾಲಾ ಮಕ್ಕಳು, ವೃದ್ಧರು, ಅನಾರೋಗ್ಯ ಪೀಡಿತರು ಈ ಮೆಸ್ಕಾಂ ನ ಕತ್ತಲೆ ಕಾಟದಿಂದ ಬೇಸತ್ತುಹೋಗಿದ್ದಾರೆ. ಈ ನಮೂನೆ ವಿದ್ಯುತ್ ಕಣ್ಣಾಮುಚ್ಚಾಲೆಯಿಂದ ಕೋಡಿ ಪರಿಸರದಲ್ಲಿ ಏನಾದರೂ ಕಳವು, ದರೋಡೆಗಳಂತವು ಮತ್ತಿತರ ಅನಪೇಕ್ಷಿತ ಘಟನೆಗಳು ನಡೆದರೆ ಯಾರು ಜವಾಬ್ದಾರರು ಎಂದು ನಾಗರಿಕರು ಪ್ರಶ್ನಿಸಿದ್ದಾರೆ. ಇನ್ನಾದರೂ ಮೆಸ್ಕಾಂ ಇಲ್ಲಿನ ಜನರ ಸಂಕಷ್ಟ ಅರಿತುಕೊಂಡು ಈ ಎಲ್ಲಾ ಸಮಸ್ಯೆಗಳನ್ನೂ ಪರಿಹರಿಸಲಿ, ಮಾತ್ರವಲ್ಲ ಈ ಭಾಗಕ್ಕೆ ಜನಸ್ನೇಹಿ ಸಿಬಂದಿಗಳನ್ನು ನೇಮಿಸಲಿ ಎಂದು ಜನರು ಹಾರೈಸಿದ್ದಾರೆ.