ಡೈಲಿ ವಾರ್ತೆ: 12/ಜುಲೈ /2024
ಬಂಟ್ವಾಳ : ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದಿಂದ ಸರ್ಕಾರಕ್ಕೆ ಮನವಿ
ಬಂಟ್ವಾಳ : ಕರ್ನಾಟಕ ರಾಜ್ಯ ಸರಕಾರಿ ನೌಕರರ ಸಂಘದ ಬಂಟ್ವಾಳ ತಾಲೂಕು ಶಾಖೆಯ ವತಿಯಿಂದ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬಂಟ್ವಾಳ ತಹಸೀಲ್ದಾರ್ ಅವರ ಮೂಲಕ ರಾಜ್ಯ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
ಈ ಸಂದರ್ಭ ರಾಜ್ಯ ಸರಕಾರಿ ನೌಕರರ ಸಂಘದ ಅಧ್ಯಕ್ಷ ಉಮನಾಥ ರೈ ಮೇರಾವು ಮಾತನಾಡಿ, ರಾಜ್ಯದಾದ್ಯಂತ 2.6 ಲಕ್ಷ ಹುದ್ದೆಗಳು ಖಾಲಿಯಿದ್ದರೂ ಭರ್ತಿ ಮಾಡಿಲ್ಲ, ರಾಜ್ಯದ ಅಭಿವೃದ್ಧಿ ಸೂಚ್ಯಂಕದ ಬೆಳವಣಿಗೆಯಲ್ಲಿ ಹಾಗೂ ಜಿಎಸ್‌ಟಿ ತೆರಿಗೆ ಸಂಗ್ರಹಣೆಯಲ್ಲಿ ಇಡೀ ರಾಜ್ಯಕ್ಕೆ ಮಾದರಿಯಾಗಲು ಸರಕಾರಿ ನೌಕರರ ಪಾತ್ರ ಪ್ರಮುಖವಾದುದು. ಆದುದರಿಂದ ರಾಜ್ಯ ಏಳನೇ ವೇತನ ಆಯೋಗ ಸರ್ಕಾರಕ್ಕೆ ಸಲ್ಲಿಸಿರುವ ವರದಿಯನ್ನು ಯಥಾವತ್ತಾಗಿ ಜಾರಿಗೊಳಿಸಿ ಸರಕಾರಿ ಆದೇಶ ಹೊಡಿಸಬೇಕು, ಎನ್‌ಪಿಎಸ್ ರದ್ದುಗೊಳಿಸಿ ಹಳೇ ಪಿಂಚಣಿ ಯೋಜನೆಯನ್ನು ಮರು ಜಾರಿಗೊಳಿಸಬೇಕು, ಕರ್ನಾಟಕ ರಾಜ್ಯ ಆರೋಗ್ಯ ಸಂಜೀವಿನಿ ಯೋಜನೆಯನ್ನು ಸರಕಾರ ಅನುಷ್ಠಾನಗೊಳಿಸಬೇಕು ಎಂದು ಒತ್ತಾಯಿಸಿದರು.
ಬಂಟ್ವಾಳ ತಹಸೀಲ್ದಾರ್ ಡಿ.ಅರ್ಚನಾ ಭಟ್ ಮನವಿ ಸ್ವೀಕರಿಸಿದರು.
ಸಂಘದ ಕಾರ್ಯದರ್ಶಿ ಸಂತೋಷ್ ಕುಮಾರ್ ತುಂಬೆ, ಕೆ.ಎಸ್.ಪಿ.ಎಸ್.ಟಿ.ಎ. ಜಿಲ್ಲಾಧ್ಯಕ್ಷ ಶಿವಪ್ರಸಾದ್ ಶೆಟ್ಟಿ, ಕೋಶಾಧಿಕಾರಿ ಬಸಯ್ಯ ಆಲಿಮಟ್ಟಿ, ಉಪಾಧ್ಯಕ್ಷ ಮಂಜುನಾಥ್ ಕೆ.ಎಚ್, ಶಮಂತ್ ಕುಮಾರ್, ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಜೊಯಲ್ ಲೋಬೋ, ಪಿಂಚಣಿದಾರರ ಸಂಘದ ಅಧ್ಯಕ್ಷ ಲೋಕನಾಥ ಶೆಟ್ಟಿ, ಕಾರ್ಯದರ್ಶಿ ನೀಲೋಜಿ ರಾವ್, ದೈಹಿಕ ಶಿಕ್ಷಣ ಶಿಕ್ಷಕರ ಸಂಘದ ಅಧ್ಯಕ್ಷರಾದ ಇಂದುಶೇಖರ್, ರಾಜೇಂದ್ರ ರೈ, ಅಕ್ಷರ ದಾಸೋಹ ನಿರ್ದೇಶಕ ನೋಣಯ್ಯ ನಾಯ್ಕ್, ಮುಖ್ಯೋಪಾಧ್ಯಾಯರ ಸಂಘದ ಅಧ್ಯಕ್ಷೆ ಪ್ರೇಮಾ, ಗ್ರಾಮಾಡಳಿತ ಅಧಿಕಾರಿಗಳ ಸಂಘದ ಅಧ್ಯಕ್ಷ ಅನಿಲ್ ಕೆ. ಪೂಜಾರಿ, ಪ್ರಮುಖರಾದ ನವೀನ್ ಪಿ.ಎಸ್, ರಮೇಶ್ ನಾಯಕ್ ರಾಯಿ, ಪ್ರಾನ್ಸಿಸ್ ಡೇಸ, ಕೃಷ್ಣಮೂರ್ತಿ, ಅಂಬಾಪ್ರಸಾದ್, ಜಗದೀಶ ರೈ, ಶ್ರೀಮತಿ, ಶಶಿಕಾಂತ, ಲ್ಯಾನ್ಸಿ , ಅಜಿತ್, ಬಾಲಕೃಷ್ಣ ರೈ, ಮುರಳೀಕೃಷ್ಣ ರಾವ್, ಮತ್ತಿತರರು ಭಾಗವಹಿಸಿದ್ದರು.