ಡೈಲಿ ವಾರ್ತೆ: 13/ಜುಲೈ /2024

ಹಣ್ಣಿನ ಅಂಗಡಿಯಲ್ಲಿ ಖರೀದಿ ಮಾಡಿದ್ದ ಕಾಲಿಫ್ಲವರ್ ನಲ್ಲಿ ಹೆಬ್ಬಾವಿನ ಮರಿ ಪತ್ತೆ.!

ಪಡುಬಿದ್ರಿ: ಪಡುಬಿದ್ರಿ ಪೇಟೆಯ ಹಣ್ಣಿನ ಅಂಗಡಿಯೊಂದರಲ್ಲಿ ಇಲ್ಲಿನ ನಿವಾಸಿಯೋರ್ವರು ಖರೀದಿ ಮಾಡಿದ್ದ ಕಾಲಿಫ್ಲವರ್ ನಲ್ಲಿ ಹೆಬ್ಬಾವಿನ ಮರಿಯೊಂದು ಪತ್ತೆಯಾಗಿದೆ.

ಪಡುಬಿದ್ರಿ ಬೇಂಗ್ರೆ ನಿವಾಸಿ ಮಹಿಳೆಯೋರ್ವರು ಪಡುಬಿದ್ರಿ ಮುಖ್ಯ ಪೇಟೆಯ ಹಣ್ಣು ಹಂಪಲು ಅಂಗಡಿಯಲ್ಲಿ ಕಾಲಿಫ್ಲವರ್ ಖರೀದಿಸಿ ಮನೆಗೆ ಹೋದವರೇ ನೇರವಾಗಿ ಅದನ್ನು ಫ್ರಿಡ್ಜ್ ನಲ್ಲಿ ಇರಿಸಿದ್ದರು.

ಮರುದಿನ ಅದನ್ನು ಉಪಯೋಗಿಸುವುದಕ್ಕಾಗಿ ಫ್ರಿಡ್ ನಿಂದ ಹೊರ ತೆಗೆದು ಕತ್ತರಿಸಲು ಮುಂದಾದಾಗ ಆ ಮಹಿಳೆಗೆ ಶಾಕ್ ಕಾದಿತ್ತು! ಕಾಲಿಫ್ಲವರ್ ಒಳಭಾಗದಿಂದ ಹೆಬ್ಬಾವಿನ ಮರಿಯೊಂದು ಹೊರಕ್ಕೆ ಎಂಟ್ರಿ ಕೊಟ್ಟಿದ್ದು ಮಹಿಳೆ ಗಾಬರಿಗೊಂಡು ಮನೆಮಂದಿಗೆ ವಿಷಯ ತಿಳಿಸಿದ್ದಾರೆ. ಅದೃಷ್ಟವಶಾತ್ ಯಾವುದೇ ಅಪಾಯ ಸಂಭವಿಸಿಲ್ಲ. ಸಾರ್ವಜನಿಕರು ಇಂಥವುಗಳನ್ನು ಖರೀದಿ ಮಾಡುವ ಮುನ್ನ ಎಚ್ಚರಿಕೆ ವಹಿಸಬೇಕಿದೆ.