ಡೈಲಿ ವಾರ್ತೆ: 15/ಜುಲೈ /2024

ಬ್ರಹ್ಮಾವರದಲ್ಲಿ 2 ವರ್ಷದ ಕೃಷಿ ಡಿಪ್ಲೋಮಾ ಕೋರ್ಸ್ ಮತ್ತೆ ಆರಂಭ – ಮಾಜಿ ಸಚಿವ, ಸಂಸದ ಜಯಪ್ರಕಾಶ ಹೆಗ್ಡೆ ಯವರ ಮನವಿಯ ಫಲಶೃತಿ

ಬ್ರಹ್ಮಾವರ: ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ಎರಡು ವರ್ಷದ ಕೃಷಿ ಡಿಪ್ಲೋಮಾ ಕೋರ್ಸ್ ಅನ್ನು 2024-25ನೇ ಸಾಲಿನಿಂದ ಮತ್ತೆ ಆರಂಭಿಸಲು ಸರ್ಕಾರ ಒಪ್ಪಿಗೆ ನೀಡಿದೆ. ಕೃಷಿ ಸಚಿವ ಎನ್. ಚಲುವರಾಯಸ್ವಾಮಿ ಅವರಿಂದ ಅನುಮೋದನೆಗೊಂಡ ಆದೇಶವನ್ನು ಹೊರಡಿಸಲಾಗಿದೆ. ಈ ಕುರಿತು ಇಂದ್ರ. ಎಂ ಸರ್ಕಾರದ ಅಧೀನ ಕಾರ್ಯದರ್ಶಿ, ಕೃಷಿ ಇಲಾಖೆ (ಸೇವೆಗಳು) ಆದೇಶ ಹೊರಡಿಸಿದ್ದಾರೆ.

ಆದೇಶದವಿವರ:
ಸರಕಾರದ ಕಾರ್ಯದರ್ಶಿ, ಕೃಷಿ ಇಲಾಖೆ ಇವರು ಕುಲಸಚಿವರು, ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಇರುವಕ್ಕಿ, ಶಿವಮೊಗ್ಗ-577 204 ಇವರಿಗೆ ಈ ಕುರಿತು ಪತ್ರವನ್ನು ಬರೆದಿದ್ದಾರೆ. ಈ ಆದೇಶದಲ್ಲಿ 33ನೇ ಸಮನ್ವಯ ಸಮಿತಿಯ ಹಾಗೂ 7ನೇ ಪರಿಣಿತ ಸಮಿತಿ ಸಭೆಯ ತೀರ್ಮಾನದಂತೆ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ, ಶಿವಮೊಗ್ಗದಡಿಯ ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ 2 ವರ್ಷಗಳ ಡಿಪ್ಲೋಮಾ (ಕೃಷಿ) ಕೋರ್ಸ್ ಅನ್ನು ಪ್ರಸ್ತುತ ಲಭ್ಯವಿರುವ ಕಟ್ಟಡ, ಮೂಲ ಸೌಕರ್ಯ ಮತ್ತು ಬೋಧನಾ ಸಿಬ್ಬಂದಿಯನ್ನು ಬಳಸಿಕೊಂಡು ಕೃಷಿ ಡಿಪ್ಲೋಮಾ ಕಾಲೇಜನ್ನು 2024-25ನೇ ಸಾಲಿನಿಂದ ಪುನ: ಪ್ರಾರಂಭಿಸುವಂತೆ ಹಾಗೂ ಈ ಕುರಿತು ಹೆಚ್ಚುವರಿ ಅನುದಾನದ ಪ್ರಸ್ತಾವನೆಯನ್ನು ಸರಕಾಕ್ಕೆ ಸಲ್ಲಿಸದೆ ಇರುವ ಷರತ್ತಿಗೊಳಪಟ್ಟು ಸರಕಾರದ ಆಡಳಿತಾತ್ಮಕ ಅನುಮೋದನೆಯನ್ನು ನೀಡಿದೆ. ಈ ಷರತ್ತಿನನ್ವಯ ನಿಯಮಾನುಸಾರ ಸೂಕ್ತ ಕ್ರಮವಹಿಸುವಂತೆ ತಮ್ಮನ್ನು ಕೋರಲು ನಾನು ನಿರ್ದೇಶಿಸಲ್ಪಟ್ಟಿದ್ದೇನೆ ಎಂದು ಹೇಳಿದೆ.

ಜಯಪ್ರಕಾಶ ಹೆಗ್ಡೆ ಕೃತಜ್ಞತೆ: ಉಡುಪಿ ಜಿಲ್ಲೆಯ ಬ್ರಹ್ಮಾವರದಲ್ಲಿ ಎರಡು ವರ್ಷ ಕೃಷಿ ಡಿಪ್ಲೋಮಾ ಕೋರ್ಸ್ ಅನ್ನು ಆರಂಭಿಸಲು ಸರ್ಕಾರ ಒಪ್ಪಿಗೆ ನೀಡಿರುವುದಕ್ಕೆ ಮಾಜಿ ಸಂಸದ ಜಯಪ್ರಕಾಶ ಹೆಗ್ಡೆ ಸಂತಸ ವ್ಯಕ್ತಪಡಿಸಿದ್ದಾರೆ. ಈ ಕುರಿತು ಫೇಸ್‌ಬುಕ್ ಪೋಸ್ಟ್ ಹಾಕಿರುವ ಅವರು, ‘ಬ್ರಹ್ಮಾವರದ ಕೃಷಿ ವಿಶ್ವ ವಿದ್ಯಾನಿಲಯದಲ್ಲಿ ಸ್ಥಗಿತಗೊಂಡಿದ್ದ ಕೃಷಿ ಡಿಪ್ಲೋಮಾ ಕಾಲೇಜು ಪುನರ್ ಆರಂಭಿಸುವಂತೆ ಮಾನ್ಯ ಕೃಷಿ ಸಚಿವರಾದ ಚಲುವರಾಯಸ್ವಾಮಿಯವರನ್ನು ಭೇಟಿಯಾಗಿ ಸಲ್ಲಿಸಿದ್ದ ಮನವಿಯನ್ನು ಪುರಸ್ಕರಿಸಿ ಇದೀಗ ಕೃಷಿ ಕಾಲೇಜನ್ನು ಪುನರ್ ಆರಂಭಿಸುವಂತೆ ಮಂಜೂರುಗೊಳಿಸಿದ ಕೃಷಿ ಸಚಿವರಿಗೆ ಕೃತಜ್ಞತೆಗಳನ್ನು ಸಲ್ಲಿಸುತ್ತಿದ್ದೇನೆ’ ಎಂದು ಹೇಳಿದ್ದಾರೆ.