
ಡೈಲಿ ವಾರ್ತೆ:ಜನವರಿ/31/2026
ಬೈಂದೂರಿನಲ್ಲಿ ಉಚಿತ ಅನ್ನಭಾಗ್ಯ ಅಕ್ಕಿ ಅಕ್ರಮ ದಾಸ್ತಾನು: 7.14 ಕ್ವಿಂಟಾಲ್ ಅಕ್ಕಿ ಜಪ್ತಿ, ಆರೋಪಿಯ ವಿರುದ್ಧ ಪ್ರಕರಣ ದಾಖಲು

ಬೈಂದೂರು: ಉಚಿತ ಅನ್ನಭಾಗ್ಯ ಯೋಜನೆಯ ಅಕ್ಕಿಯನ್ನು ಅಕ್ರಮವಾಗಿ ದಾಸ್ತಾನು ಮಾಡಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶ ಹೊಂದಿದ್ದ ಆರೋಪಿಯೊಬ್ಬನ ವಿರುದ್ಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಪಿರ್ಯಾದಿದಾರರಾದ ವಿನಯ್ ಕುಮಾರ (49), ಆಹಾರ ನಿರೀಕ್ಷಕರು, ಬೈಂದೂರು ಇವರಿಗೆ ಲಭಿಸಿದ ಖಚಿತ ಮಾಹಿತಿಯ ಮೇರೆಗೆ ಬಿಜೂರು ಗ್ರಾಮದ ಹರಕೇರಿ ಎಂಬಲ್ಲಿ ಆರೋಪಿ ಅಬ್ದುಲ್ ಬಿನ್ ಅಬ್ಬಾಸ್ ಅವರ ಮನೆಯ ಮೇಲೆ ದಿನಾಂಕ 30/01/2026 ರಂದು ಬೆಳಿಗ್ಗೆ 9:40 ಗಂಟೆಗೆ ಪಂಚರ ಸಮಕ್ಷಮದಲ್ಲಿ ದಾಳಿ ನಡೆಸಲಾಯಿತು.
ದಾಳಿಯ ವೇಳೆ ಉಚಿತ ಅನ್ನಭಾಗ್ಯ ಯೋಜನೆಗೆ ಸಂಬಂಧಿಸಿದ ಕುಚ್ಚಲು ಅಕ್ಕಿಯನ್ನು ಕಾನೂನು ಬಾಹಿರವಾಗಿ ಯಾರಿಂದಲೋ ಖರೀದಿಸಿ ಹೆಚ್ಚಿನ ಬೆಲೆಗೆ ಮಾರಾಟ ಮಾಡುವ ಉದ್ದೇಶದಿಂದ ತನ್ನ ಮನೆಯಲ್ಲಿ ಅಕ್ರಮವಾಗಿ ದಾಸ್ತಾನು ಮಾಡಿರುವುದು ಪತ್ತೆಯಾಗಿದೆ. ಒಟ್ಟು 7.14 ಕ್ವಿಂಟಾಲ್ ತೂಕದ, ರೂ.16,422/- ಮೌಲ್ಯದ 16 ಪಾಲಿಥಿನ್ ಚೀಲಗಳಲ್ಲಿ ತುಂಬಿದ್ದ ಅಕ್ಕಿಯನ್ನು ಅಧಿಕಾರಿಗಳು ಸ್ವಾಧೀನಪಡಿಸಿಕೊಂಡಿದ್ದಾರೆ.
ಜಪ್ತಿ ಮಾಡಲಾದ ಅಕ್ಕಿಯನ್ನು ತಲ್ಲೂರು TAMPMC ಗೋಡಾಮಿಗೆ ಸ್ಥಳಾಂತರಿಸಲಾಗಿದೆ.
ಈ ಸಂಬಂಧ ಬೈಂದೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಕ್ರಮಾಂಕ 08/2026 ರಂತೆ ಅಗತ್ಯ ವಸ್ತುಗಳ ಕಾಯ್ದೆ (Essential Commodities Act) ಕಲಂ 3, 6 ಮತ್ತು 7 ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ಮುಂದಿನ ತನಿಖೆ ಕೈಗೊಳ್ಳಲಾಗಿದೆ.