ಡೈಲಿ ವಾರ್ತೆ:ಜನವರಿ/31/2026

ಕುಂದಾಪುರ| ಹಣ ದ್ವಿಗುಣಗೊಳಿಸುವ ಆಮಿಷ: ಖಾಸಗಿ ಕಾಲೇಜು ಉಪನ್ಯಾಸಕರಿಗೆ ₹26 ಲಕ್ಷ ವಂಚನೆ, ಹಣ ಕೇಳಿದರೆ ಕೊಲೆ ಬೆದರಿಕೆ – ಪ್ರಕರಣ ದಾಖಲು

ಕುಂದಾಪುರ: ಹಣ ಹೂಡಿಕೆ ಮಾಡಿದರೆ ತಿಂಗಳೊಳಗೆ ದ್ವಿಗುಣ ಲಾಭ ನೀಡುವುದಾಗಿ ಹೇಳಿ ಖಾಸಗಿ ಕಾಲೇಜು ಉಪನ್ಯಾಸಕರೊಬ್ಬರಿಗೆ ಸುಮಾರು ₹26 ಲಕ್ಷಕ್ಕೂ ಅಧಿಕ ಮೊತ್ತ ವಂಚಿಸಿರುವ ಘಟನೆ ಕುಂದಾಪುರದಲ್ಲಿ ಬೆಳಕಿಗೆ ಬಂದಿದೆ.

ಮಂಗಳೂರಿನ ಖಾಸಗಿ ಕಾಲೇಜಿನಲ್ಲಿ ಉಪನ್ಯಾಸಕರಾಗಿರುವ ಸುಬ್ರಹ್ಮಣ್ಯ ವಿಜಯ್ ಆರ್. (38) ವಂಚನೆಗೊಳಗಾದವರು.

ಬಾರ್ಕೂರಿನ ರಾಘವೇಂದ್ರ ಎಂಬವರ ಪರಿಚಯದ ಮೂಲಕ ಮುಂಬಯಿಯ ಸಂತೋಷ್ ಮಹೇಂದ್ರ (43) ಎಂಬಾತ ವಂಚನೆ ಎಸಗಿರುವ ಆರೋಪ ಎದುರಿಸುತ್ತಿದ್ದಾನೆ.

ದೂರುದಾರರ ಪ್ರಕಾರ, 2022ರ ಜೂನ್ ತಿಂಗಳಲ್ಲಿ ಕಾವ್ರಾಡಿಯಲ್ಲಿರುವ ಕಂಪ್ಯೂಟರ್ ಕೇಂದ್ರದಲ್ಲಿ ರಾಘವೇಂದ್ರ ಜೊತೆಯಲ್ಲಿ ಆರೋಪಿ ಸಂತೋಷ್ ಮಹೇಂದ್ರನನ್ನು ಭೇಟಿಯಾಗಿ ‘ರಿಚ್ ಲೈಫ್ ಕೇರ್’ ಕಂಪೆನಿಯಲ್ಲಿ ಹಣ ಹೂಡಿಕೆ ಮಾಡಿದರೆ ತಿಂಗಳೊಳಗೆ ಹಣ ದ್ವಿಗುಣಗೊಳ್ಳುತ್ತದೆ ಎಂದು ತಿಳಿಸಿದ್ದಾನೆ. ಹೆಚ್ಚಿನ ಹೂಡಿಕೆ ಮಾಡಿದರೆ ಕಾರು ನೀಡುವುದಾಗಿ ಆಮಿಷವೊಡ್ಡಿದ್ದಾನೆ.
ಆತನ ಮಾತುಗಳನ್ನು ನಂಬಿದ ಸುಬ್ರಹ್ಮಣ್ಯ ವಿಜಯ್ ಅವರು ಸ್ಥಳದಲ್ಲೇ ₹2.96 ಲಕ್ಷ ರೂ. ನಗದು ನೀಡಿದ್ದು, ನಂತರ ಹಂತ ಹಂತವಾಗಿ ತಮ್ಮ ಬ್ಯಾಂಕ್ ಖಾತೆಯಿಂದ ಆರೋಪಿಯ ಖಾತೆಗೆ ಒಟ್ಟು ₹26.50 ಲಕ್ಷ ರೂ. ಜಮೆ ಮಾಡಿದ್ದಾರೆ. ಆದರೆ ಹೂಡಿಕೆ ಮಾಡಿದ ಹಣ ಹಿಂದಿರುಗಿಸುವಂತೆ ಕೇಳಿದಾಗ ಒಟ್ಟು ₹2 ಲಕ್ಷ ರೂ. ಮಾತ್ರ ಮರಳಿಸಲಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಇದಾದ ಬಳಿಕ ಹಣ ವಾಪಸ್ ಕೇಳಿದಾಗ, ರಾಘವೇಂದ್ರನ ಮೊಬೈಲ್ ಮೂಲಕ ಆರೋಪಿಗೆ ಕರೆ ಮಾಡಿದ ಸುಬ್ರಹ್ಮಣ್ಯ ವಿಜಯ್ ಅವರಿಗೆ ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿರುವುದಲ್ಲದೆ, ಜನರನ್ನು ಬಿಟ್ಟು ಕೊಲೆ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎನ್ನಲಾಗಿದೆ.

ಈ ಸಂಬಂಧ ಸುಬ್ರಹ್ಮಣ್ಯ ವಿಜಯ್ ಅವರು ನೀಡಿದ ದೂರಿನ ಆಧಾರದ ಮೇಲೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.