
ಡೈಲಿ ವಾರ್ತೆ:ಜನವರಿ/31/2026
ಕೋಟ ಹಾಡಿಕೆರೆ ಬೆಟ್ಟಿನಲ್ಲಿ ಅಮೃತೇಶ್ವರಿ ದಶಾವತಾರ ಮೇಳದ ಯಕ್ಷಗಾನ ಬಯಲಾಟ: ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೋಟ ಸುರೇಶ್ ಅವರಿಗೆ ಗೌರವ ಸನ್ಮಾನ

ಕೋಟ: ಶ್ರೀ ಕ್ಷೇತ್ರ ಅಮೃತೇಶ್ವರಿ ದಶಾವತಾರ ಮೇಳ, ಕೋಟ ಇವರ ಯಕ್ಷಗಾನ ಬಯಲಾಟವು ಜ.30ರಂದು ಶುಕ್ರವಾರ ರಾತ್ರಿ ಕೋಟ ಹಾಡಿಕೆರೆ ಹತ್ತು ಸಮಸ್ತರ ಆಶ್ರಯದಲ್ಲಿ ಹಾಡಿಕೆರೆ ಶನೀಶ್ವರ ದೇವಸ್ಥಾನ ವಠಾರದಲ್ಲಿ ಭಕ್ತಿಭಾವ ಮತ್ತು ಸಾಂಸ್ಕೃತಿಕ ವೈಭವದೊಂದಿಗೆ ನಡೆಯಿತು.
ಈ ಸಂದರ್ಭದಲ್ಲಿ ಹಾಡಿಕೆರೆ ಗ್ರಾಮಸ್ಥರ ವತಿಯಿಂದ ಮೇಳದ ಪ್ರಮುಖ ಕಲಾವಿದ ಹಾಗೂ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೋಟ ಸುರೇಶ್ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.

ಅಮೃತೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಅಧ್ಯಕ್ಷ ಆನಂದ್ ಸಿ. ಕುಂದರ್ ಅವರು ಕೋಟ ಸುರೇಶ್ ಅವರಿಗೆ ಗೌರವ ಪುರಸ್ಕಾರ ನೀಡಿ ಅಭಿನಂದಿಸಿದರು.
ಸನ್ಮಾನಿಸಿ ಮಾತನಾಡಿದ ಆನಂದ್ ಸಿ. ಕುಂದರ್ ಅವರು, ಹಾಡಿಕೆರೆ ಬೆಟ್ಟಿನವರು ಪ್ರತಿವರ್ಷ ಅಮೃತೇಶ್ವರಿ ಕಲಾದೇವಿಗೆ ಅತ್ಯಂತ ಪ್ರಿಯವಾದ ಯಕ್ಷಗಾನ ಸೇವೆಯನ್ನು ನಿಷ್ಠೆಯಿಂದ ಸಲ್ಲಿಸುತ್ತಿರುವುದು ಶ್ಲಾಘನೀಯ. ಇಂತಹ ಸಂದರ್ಭದಲ್ಲಿ ನಮ್ಮ ಮೇಳದ ಕಲಾವಿದರಾದ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಕೋಟ ಸುರೇಶ್ ಅವರನ್ನು ಗುರುತಿಸಿ ಗೌರವಿಸಿರುವುದು ಸಂತಸದ ವಿಷಯ ಎಂದು ಹೇಳಿದರು.
ಇದೇ ಸಂದರ್ಭದಲ್ಲಿ ಅವರು ಮಾರ್ಚ್ 1ರಂದು ಅಮೃತೇಶ್ವರಿ ದೇವಸ್ಥಾನದ ವತಿಯಿಂದ ನಡೆಯಲಿರುವ ನಾಗಮಂಡಲೋತ್ಸವಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಹೊರೆ ಕಾಣಿಕೆ ಸಲ್ಲಿಸುವಂತೆ ಭಕ್ತರಲ್ಲಿ ಮನವಿ ಮಾಡಿದರು.
ಕಾರ್ಯಕ್ರಮದಲ್ಲಿ ಹಾಡಿಕೆರೆ ಶನೀಶ್ವರ ದೇವಸ್ಥಾನದ ಆಡಳಿತ ಮುಕ್ತೇಸರರಾದ ಭಾಸ್ಕರ್ ಸ್ವಾಮಿ, ಕೋಟ ಪಂಚಾಯತ್ ಉಪಾಧ್ಯಕ್ಷ ಪಾಂಡು ಪೂಜಾರಿ, ಅಮೃತೇಶ್ವರಿ ದೇವಸ್ಥಾನದ ವ್ಯವಸ್ಥಾಪನ ಸಮಿತಿಯ ಸದಸ್ಯರಾದ ಶಿವ ಪೂಜಾರಿ, ಗಣೇಶ್ ಕೆ. ನೆಲ್ಲಿಬೆಟ್ಟು, ಚಂದ್ರಶೇಖರ್ ಆಚಾರ್, ಸುಧಾ ಎ. ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು.
ಕಾರ್ಯಕ್ರಮವನ್ನು ಚಂದ್ರ ಆಚಾರಿ ಕೋಟ ಸ್ವಾಗತಿಸಿ ವಂದಿಸಿದರು. ಸಭಾ ಕಾರ್ಯಕ್ರಮದ ನಂತರ ಯಕ್ಷಗಾನ “ಚಂದ್ರಾವಳಿ ಹಾಗೂ ಕುಶಲವ” ಪ್ರದರ್ಶನಗೊಂಡು ಕಲಾರಸಿಕರಿಂದ ಅಪಾರ ಮೆಚ್ಚುಗೆ ಪಡೆಯಿತು.