ಡೈಲಿ ವಾರ್ತೆ:ಜನವರಿ/31/2026

ಮಾನಂಜೆ ವ್ಯವಸಾಯ ಸೇವಾ ಸಹಕಾರ ಸಂಘದ ಅಮೃತ ಮಹೋತ್ಸವ: ಸಹಕಾರಿ ಸಂಘಗಳ ಬೆಳವಣಿಗೆಯಲ್ಲಿ ಠೇವಣಿದಾರರಂತೆಯೇ ಸಾಲಗಾರರ ಪಾತ್ರವೂ ಮಹತ್ವದ್ದಾಗಿದೆ – ಎಸ್. ಸಚ್ಚಿದಾನಂದ ಚಾತ್ರ

ಕುಂದಾಪುರ: ಸಹಕಾರಿ ಸಂಘಗಳ ಬೆಳವಣಿಗೆಯಲ್ಲಿ ಠೇವಣಿದಾರರಂತೆಯೇ ಸಾಲಗಾರರ ಪಾತ್ರವೂ ಮಹತ್ವದ್ದಾಗಿದ್ದು ಇಬ್ಬರನ್ನೂ ಸಮಾನವಾಗಿ ಗೌರವಿಸಬೇಕು ಎಂದು ಶ್ರೀ ಕ್ಷೇತ್ರ ಕಮಲಶಿಲೆ ಶ್ರೀ ಬ್ರಾಹ್ಮೀ ದುರ್ಗಾ ಪರಮೇಶ್ವರೀ ದೇವಳದ ಅನುವಂಶಿಕ ಆಡಳಿತ ಮೊಕ್ತೇಸರ ಎಸ್. ಸಚ್ಚಿದಾನಂದ ಚಾತ್ರ ಹೇಳಿದರು.

ಕಮಲಶಿಲೆಯಲ್ಲಿನ ಮಾನಂಜೆ ವ್ಯವಸಾಯ ಸೇವಾ ಸಹಕಾರ ಸಂಘದ ಅಮೃತ ಮಹೋತ್ಸವ “ಅಮೃತಯಾನ” ಕಾರ್ಯಕ್ರಮವನ್ನು ಮಾನಂಜೆಯ ಕೇಂದ್ರ ಕಚೇರಿ ಆವರಣದಲ್ಲಿ ಉದ್ಘಾಟಿಸಿ ಅವರು ಶುಭ ಹಾರೈಸಿದರು.

1950 ರಲ್ಲಿಯೇ ನಾರಾಯಣ ರಾಯರು ತಮ್ಮ ಮನೆಯಲ್ಲೇ ಈ ಸೊಸೈಟಿಯನ್ನು ಆರಂಭಿಸಿದ್ದು, ಇಂದು ಸರ್ವರ ಶ್ರಮ – ಸಹಕಾರದಿಂದ ಅಭಿವೃದ್ಧಿಯ ಹಾದಿಯಲ್ಲಿ ಸಾಗಿದೆ. ವಿದ್ಯುತ್ ದೀಪ ಇಲ್ಲದ ಆ ದಿನಗಳಲ್ಲಿ ರಾತ್ರಿ ವೇಳೆ ಸೊಸೈಟಿಯ ಸದಸ್ಯರು ಲಾಟಾನು ಹಿಡಿದುಕೊಂಡು ಮನೆ ಮನೆಗೆ ಅಲೆದು ಸಂಘದ ಅಭಿವೃದ್ಧಿಗಾಗಿ ಶ್ರಮಿಸಿದ್ದರು ಎಂಬುದನ್ನು ಸ್ಮರಿಸಿದ ಚಾತ್ರರು, ಕಮಲಶಿಲೆ, ಮಾನಂಜೆ ಸುತ್ತಲಿನ ಪರಿಸರದಲ್ಲಿ ಒಳ್ಳೇ ಮಳೆ – ಬೆಳೆ ಉಂಟಾಗಿ ಸಮೃದ್ಧಿ ಯಾಗುವಂತೆಯೂ ಜನರು ದುಶ್ಚಟಕ್ಕೆ ಬೀಳದಂತೆಯೂ ಶ್ರೀ ಅಮ್ಮನವರು ಅನುಗ್ರಹಿಸಲಿ ಎಂದು ಹಾರೈಸಿದರು.

ಕೇಂದ್ರ ಕಚೇರಿಯಲ್ಲಿ ನೂತನವಾಗಿ ಅಳವಡಿಸಿದ ಲಿಫ್ಟ್ ವ್ಯವಸ್ಥೆಯನ್ನು ಉದ್ಘಾಟಿಸಿ, ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕುಂದಾಪುರದ ಶಾಸಕ ಕಿರಣ್ ಕುಮಾರ್ ಕೊಡ್ಗಿ ಮಾತನಾಡಿ, ಮಾನಂಜೆ ಸಂಘದ ವ್ಯಾಪ್ತಿಯ ನಾಲ್ಕೂ ಗ್ರಾಮಗಳಲ್ಲಿನ ರೈತರಿಗೆ ವಾಸ್ತವವಾಗಿ ಸಾಲದ ಅಗತ್ಯವಿಲ್ಲ. ಆದರೂ ತಮ್ಮ ಸಂಘದ ಹಿತದೃಷ್ಟಿಯಿಂದ ಸಾಲವನ್ನು ಪಡೆದು ಸಂಘದ ಅಭಿವೃದ್ಧಿಗೆ ಕಾರಣರಾಗಿದ್ದಾರೆ. ಅಡಿಕೆ ಬೆಳೆಯುವ ಶ್ರೀಮಂತ ರೈತರೇ ಇರುವ ಈ ಪ್ರದೇಶದ ಸಂಘ ಇವರೆಲ್ಲರ ಸಹಕಾರದಿಂದಲೇ ಇಂದು ರಾಷ್ಟ್ರೀಕೃತ ಬ್ಯಾಂಕನ್ನೂ ಮೀರಿಸಿ ಅಭಿವೃದ್ಧಿ ಹೊಂದಿದೆ ಎಂದರು.

ಕೇಂದ್ರ ಕಚೇರಿಯ ಎದುರು ರಸ್ತೆ ಬದಿಯಲ್ಲಿ ಸಂಘದg ವತಿಯಿಂದ ನಿರ್ಮಿಸಲಾದ ನೂತನ ಬಸ್ ಸ್ಟ್ಯಾಂಡ್ ಕಟ್ಟಡವನ್ನು ಬೈಂದೂರು ಶಾಸಕ ಗುರುರಾಜ ಶೆಟ್ಟಿ ಗಂಟಿಹೊಳೆ ಉದ್ಘಾಟಿಸಿ ಶುಭ ಹಾರೈಸಿದರು.

ರೈತರ ಉಪಯೋಗಕ್ಕಾಗಿ ನಿರ್ಮಿಸಿದ ನೂತನ ಗೋದಾಮನ್ನು ದ ಕ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ನಿರ್ದೇಶಕ ಮಹೇಶ್ ಹೆಗ್ಡೆ ಮೊಳಹಳ್ಳಿ ಉದ್ಘಾಟಿಸಿದರು.

ಅಮೃತ ಮಹೋತ್ಸವ ನೆನಪಿಗಾಗಿ ಹೊರತಂದ ಸ್ಮರಣ ಸಂಚಿಕೆಯನ್ನು ಸೊಸೈಟಿಯ ಮಾಜಿ ಕಾರ್ಯನಿರ್ವಾಹಣಾಧಿಕಾರಿ ಶ್ರೀಕಾಂತ ಕನ್ನಂತ ಬಿಡುಗಡೆಗೊಳಿಸಿದರು.

ಮಾಸ್ ಅಡಿಕೆ ಕೇಂದ್ರವನ್ನು ಮಾನಂಜೆ ರಾಘವೇಂದ್ರ ರಾವ್ ಉದ್ಘಾಟಿಸಿದರು. ಕ್ಯಾಂಪ್ಕೊ ಉಪಾಧ್ಯಕ್ಷ ಪದ್ಮರಾಜ್ ಮಾರಾಟ ಸ್ಟಾಲ್ ಗಳನ್ನು ಉದ್ಘಾಟಿಸಿದರು.

ಮುಖ್ಯ ಅತಿಥಿಗಳಾಗಿದ್ದ ಮಾಸ್ ನಿರ್ದೇಶಕ ನಿತ್ಯಾನಂದ ಮದ್ದೋಡಿ, ಉಡುಪಿ ಜಿಲ್ಲಾ ಸಹಕಾರಿ ಯೂನಿಯನ್ ಅಧ್ಯಕ್ಷ ಬಿ. ಜಯಕರ ಶೆಟ್ಟಿ, ಇಂದ್ರಾಳಿ, ಉಡುಪಿ ಸಹಕಾರ ಸಂಘಗಳ ಉಪನಿಬಂಧಕಿ ಲಾವಣ್ಯ, ಕುಂದಾಪುರ ಉಪವಿಭಾಗ ಸ. ಸಂಘಗಳ ಸಹಾಯಕ ನಿಬಂಧಕ ಸುಧೀರ್ ಕುಮಾರ್ ಜೆ., ದ ಕ ಸಹಕಾರಿ ಹಾಲುತ್ಪಾದ ಕರ ಒಕ್ಕೂಟದ ಅಧ್ಯಕ್ಷ ರವಿರಾಜ್ ಹೆಗ್ಡೆ, ಆಜ್ರಿ ಗ್ರಾ ಪಂ ಅಧ್ಯಕ್ಷೆ ಮುಕಾಂಬು ಶೆಡ್ತಿ, ಹಳ್ಳಿಹೊಳೆ ಗ್ರಾ ಪಂ ಅಧ್ಯಕ್ಷ ಮಂಜುನಾಥ ಶೆಟ್ಟಿ, ಯಡಮೊಗೆ ಗ್ರಾ ಪಂ ಅಧ್ಯಕ್ಷೆ ಸುಮತಿ ಗಾಣಿಗ ಶುಭ ಹಾರೈಸಿದರು.

ಸಂಘದ ಮಾಜಿ ಅಧ್ಯಕ್ಷರುಗಳಾದ ಎಸ್. ಶಂಕರನಾರಾಯಣ ಯಡಿಯಾಳ, ರಾಮಕೃಷ್ಣ ರಾವ್ ಬರೆಗುಂಡಿ, ಎಸ್. ವಾಸುದೇವ ಯಡಿಯಾಳ, ಜಗದೀಶ ಯಡಿಯಾಳ, ಜಯರಾಮ ಯಡಿಯಾಳ, ಬಾಲಚಂದ್ರ ಭಟ್, ಚಂದ್ರಶೇಖರ ಶೆಟ್ಟಿ ಇನ್ನಿತರರು ವೇದಿಕೆಯಲ್ಲಿದ್ದರು.

ಮಾನಂಜೆ ವ್ಯ. ಸೇವಾ ಸಹಕಾರ ಸಂಫದ ಅಧ್ಯಕ್ಷ ಬಿ. ಪ್ರದೀಪ್ ಯಡಿಯಾಳ ಸಮಾರಂಭದ ಅಧ್ಯಕ್ಷತೆ ವಹಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು.

ಉಪಾಧ್ಯಕ್ಷ ಸುದೀಪ ಶೆಟ್ಟಿ ಸ್ವಾಗತಿಸಿದರು. ನಿರ್ದೇಶಕರಾದ ಎ. ಮಾಧವ ಶೆಣೈ, ಎಸ್. ನಾರಾಯಣ ಯಡಿಯಾಳ, ಎಮ್. ದೇವದಾಸ ಶೆಟ್ಟಿ, ಬಿ. ಮಂಜುನಾಥ ರಾವ್, ಎಮ್ ಎಸ್ ವಿಷ್ಣುಮೂರ್ತಿ, ಅನಿತಾ, ರೋಹಿಣಿ, ನರಸಿಂಹ ಪೂಜಾರಿ, ಜಯಂತ ಶೆಟ್ಟಿ, ರವೀಂದ್ರ, ಗುರುರಾಜ ನಾಯ್ಕ, ವಿನೋದ, ಚಂದ್ರಶೇಖರ ಶೆಟ್ಟಿ ಉಪಸ್ಥಿತರಿದ್ದರು. ಸಂಘದ ಮಾಜಿ ಪದಾಧಿಕಾರಿಗಳು ಹಾಗೂ ನಿವೃತ್ತ ಸಿಬಂದಿಗಳನ್ನು ಸನ್ಮಾನಿಸಲಾಯಿತು.

ಪತ್ರಕರ್ತ ಸುಬ್ರಹ್ಮಣ್ಯ ಪಡುಕೋಣೆ ಕಾರ್ಯಕ್ರಮ ನಿರೂಪಿಸಿ, ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ. ಮಂಜುನಾಥ ನಾಯ್ಕ ವಂದಿಸಿದರು.

ಉದ್ಘಾಟನಾ ಪೂರ್ವದಲ್ಲಿ ಕಮಲಶಿಲೆ ದೇವಸ್ಥಾನದಿಂದ ಅತಿಥಿ ಗಣ್ಯರನ್ನು ಭವ್ಯ ಮೆರವಣಿಗೆಯ ಮೂಲಕ ವೇದಿಕೆಗೆ ಕರೆತರಲಾಯಿತು. ಸಾಂಸ್ಕೃತಿಕ ಕಾರ್ಯಕ್ರಮಗಳಾಗಿ ಹೋಳಿ ನೃತ್ಯ, ಕೋಲಾಟ, ಹೌಂದಾ ರಾಯನ ಓಲಗ, ಯಕ್ಷಗಾನ, ಜಾದೂ, ಗಂಗಾವತಿ ಪ್ರಾಣೇಶ್ ತಂಡದವರಿಂದ ನಗೆಹಬ್ಬ, ಸಂಗೀತ ಕಾರ್ಯಕ್ರಮಗಳು ನಡೆದವು.