ಡೈಲಿ ವಾರ್ತೆ: 16/ಜುಲೈ /2024

ಅಂಕೋಲಾ: ಶಿರೂರು ಬಳಿ ಗುಡ್ಡ ಕುಸಿದು 9 ಮಂದಿ ನಾಪತ್ತೆ – ನೀರಿನಲ್ಲಿ ಕೊಚ್ಚಿ ಹೋದ ಟ್ಯಾಂಕರ್.!

ಕಾರವಾರ : ಉತ್ತರ ಕನ್ನಡ ಜಿಲ್ಲೆಯಾದ್ಯಂತ ಭಾರಿ ಮಳೆ ಸುರಿಯುತ್ತಿದ್ದು, ಅಂಕೋಲಾ ತಾಲೂಕಿನ ಶಿರೂರು ಬಳಿ ಗುಡ್ಡ ಕುಸಿದು 9 ಮಂದಿ ಮಣ್ಣಿನಡಿ ಸಿಲುಕಿರುವ ಶಂಕೆ ವ್ಯಕ್ತವಾಗಿದೆ. ಇದರಲ್ಲಿ ಒಂದೇ ಕುಟುಂಬದ ಐವರು ಇದ್ದಾರೆ ಎನ್ನಲಾಗಿದೆ. ಒಂದೇ ಕುಟುಂಬದ ಲಕ್ಷ್ಮಣ ನಾಯ್ಕ, ಶಾಂತಿ ನಾಯ್ಕ, ರೋಷನ್​, ಆವಂತಿಕಾ, ಜಗನ್ನಾಥ ಸೇರಿದಂತೆ 9 ಮಂದಿ ಮಣ್ಣಿನಡಿ ಸಿಲುಕಿರುವ ಶಂಕೆ ಇದೆ. ಸ್ಥಳಕ್ಕೆ ಅಗ್ನಿಶಾಮಕ ಸಿಬ್ಬಂದಿ, ಎನ್​ಡಿಆರ್​ಎಫ್ ಸಿಬ್ಬಂದಿ ಧಾವಿಸಿದ್ದು, ರಕ್ಷಣಾ ಕಾರ್ಯಾಚರಣೆ ಪ್ರಗತಿಯಲ್ಲಿದೆ. ಗುಡ್ಡ ಕುಸಿತದಿಂದ ಹೆದ್ದಾರಿಯಲ್ಲಿ‌ ವಾಹನ ಸಂಚಾರ ಸ್ಥಗಿತಗೊಂಡಿದೆ.

ರಸ್ತೆ ಬದಿ ಚಹಾ ಕುಡಿಯುತ್ತಿದ್ದ ವೇಳೆ ದುರ್ಘಟನೆ:
ರಾಷ್ಟ್ರೀಯ ಹೆದ್ದಾರಿ 66 ರ ಪಕ್ಕದಲ್ಲಿ ಟ್ಯಾಂಕರ್ ಚಾಲಕ ಹಾಗೂ ಕ್ಲೀನರ್ ಟಿ ಕುಡಿಯುತ್ತಿದ್ದರು. ಇದೇ ವೇಳೆ ಭಾರಿ ಗುಡ್ಡ ಕುಸಿದಿದೆ. ಗುಡ್ಡ ಕುಸಿತದ ರಭಸಕ್ಕೆ ಗ್ಯಾಸ್ ಟ್ಯಾಂಕರ್ ನದಿಗೆ ಬಿದ್ದಿದ್ದು, ಚಾಲಕ ಹಾಗೂ ಕ್ಲೀನರ್ ಮಣ್ಣಿನಡಿ ಸಿಲುಕಿದ್ದಾರೆ. ಮಣ್ಣಿನಡಿ ಸಿಲುಕಿದವರು ಮೃತಪಟ್ಟಿರುವ ಸಾಧ್ಯತೆ ಇದೆ ಎನ್ನಲಾಗುತ್ತಿದ್ದು, ಜಿಲ್ಲಾಡಳಿತವು ಹೆದ್ದಾರಿ‌ ಮೇಲಿನನ ಮಣ್ಣಿನ ತೆರವು ಕಾರ್ಯಾಚರಣೆ ಪ್ರಾರಂಭಿಸಿದೆ.

ಹೆಗಡೆ ಗ್ರಾಮ ಸಂಪೂರ್ಣ ಜಲಾವೃತ:
ಅಬ್ಬರದ ಮಳೆಗೆ ಊರಿಗೆ ಊರೇ ಜಲಾವೃತಗೊಂಡಿದೆ. ಕುಮಟಾ ತಾಲೂಕಿನ ಹೆಗಡೆ ಗ್ರಾಮ ಸಂಪೂರ್ಣ ಜಲಾವೃತಗೊಂಡಿದೆ. ಸುಮಾರು 200 ಕ್ಕೂ ಹೆಚ್ಚು ಮನೆಗಳಿರುವ ಚಿಕ್ಕ ಗ್ರಾಮ ಇದಾಗಿದ್ದು, ಗ್ರಾಮದಲ್ಲಿದ್ದ ಎಲ್ಲ ಮನೆಗಳು ಸಂಪೂರ್ಣ ಜಲಾವೃತಗೊಂಡಿವೆ. ಸಂತ್ರಸ್ತರನ್ನು ಬೋಟ್ ಮೂಲಕ ಹೊರತರಲಾಗುತ್ತಿದೆ. ಜಾನುವಾರುಗಳ ಸಮೇತ ಜನರನ್ನು ಹೊರತರಲು ಹರಸಾಹಸಪಡಲಾಗುತ್ತಿದೆ.