
ಡೈಲಿ ವಾರ್ತೆ: ಫೆ./01/2026
ಬಜೆಟ್ ಮುನ್ನವೇ ಚಿನ್ನ–ಬೆಳ್ಳಿಗೆ ಭಾರೀ ಇಳಿಕೆ: ಆಭರಣ ಪ್ರಿಯರಿಗೆ, ಮದುವೆ ಸೀಸನ್‌ಗೆ ಸಿಹಿ ಸುದ್ದಿ

ನವದೆಹಲಿ, ಫೆಬ್ರವರಿ 1: ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು 2026–27ನೇ ಸಾಲಿನ ಕೇಂದ್ರ ಬಜೆಟ್ ಮಂಡಿಸುವುದಕ್ಕೂ ಮುನ್ನವೇ, ಚಿನ್ನ ಹಾಗೂ ಬೆಳ್ಳಿ ಖರೀದಿದಾರರಿಗೆ ಸಂತಸದ ಸುದ್ದಿ ಲಭಿಸಿದೆ. ಕಳೆದ ಕೆಲವು ದಿನಗಳಿಂದ ನಿರಂತರ ಏರಿಕೆ ಕಂಡಿದ್ದ ಚಿನ್ನದ ಬೆಲೆಯಲ್ಲಿ ಇಂದು ಗಮನಾರ್ಹ ಇಳಿಕೆ ಕಂಡುಬಂದಿದೆ.
ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿ ಇಂದು 22 ಕ್ಯಾರೆಟ್ 10 ಗ್ರಾಂ ಚಿನ್ನದ ಬೆಲೆ ಸುಮಾರು 1,47,200 ರೂ. ಆಗಿದ್ದು, 24 ಕ್ಯಾರೆಟ್ (ಅಪರಂಜಿ) 10 ಗ್ರಾಂ ಚಿನ್ನದ ಬೆಲೆ 1,60,580 ರೂ. ಆಗಿದೆ. ಕಳೆದ ವಾರಕ್ಕೆ ಹೋಲಿಸಿದರೆ ಪ್ರತಿ ಗ್ರಾಂ ಚಿನ್ನದ ಬೆಲೆಯಲ್ಲಿ 700 ರಿಂದ 900 ರೂ.ವರೆಗೆ ಇಳಿಕೆ ಕಂಡುಬಂದಿದೆ.
ಚಿನ್ನದೊಂದಿಗೆ ಬೆಳ್ಳಿಯ ಬೆಲೆಯೂ ಕುಸಿತ ಕಂಡಿದ್ದು, ಬೆಂಗಳೂರಿನಲ್ಲಿ ಇಂದು 1 ಕೆಜಿ ಬೆಳ್ಳಿಯ ಬೆಲೆ ಸುಮಾರು 45,000 ರೂ. ಇಳಿಕೆಯಾಗಿ 3,50,000 ರೂ.ಗೆ ತಲುಪಿದೆ. ಪ್ರತಿ ಗ್ರಾಂ ಬೆಳ್ಳಿಯ ದರ 350 ರೂ. ಆಗಿದೆ.
ಜಾಗತಿಕ ಮಾರುಕಟ್ಟೆಯಲ್ಲಿನ ಏರಿಳಿತ, ಹೂಡಿಕೆದಾರರು ಲಾಭಾಂಶ ಹಿಂಪಡೆಯುತ್ತಿರುವುದು ಹಾಗೂ ಬಜೆಟ್‌ನಲ್ಲಿ ಆಮದು ಸುಂಕದ ಕುರಿತಾದ ನಿರೀಕ್ಷೆಗಳು ಈ ಬೆಲೆ ಇಳಿಕೆಗೆ ಕಾರಣವೆಂದು ತಜ್ಞರು ವಿಶ್ಲೇಷಿಸಿದ್ದಾರೆ.
ಮದುವೆ ಸೀಸನ್ ಆರಂಭವಾಗುತ್ತಿರುವ ಈ ಸಂದರ್ಭದಲ್ಲಿ ಚಿನ್ನ–ಬೆಳ್ಳಿ ಬೆಲೆ ಇಳಿಕೆಯು ಜನಸಾಮಾನ್ಯರು ಹಾಗೂ ಆಭರಣ ವ್ಯಾಪಾರಿಗಳಿಗೆ ನಿರಾಳತೆ ತಂದಿದೆ.