
ಡೈಲಿ ವಾರ್ತೆ: ಫೆ./01/2026
ಹಿರೇ ಮಹಾಲಿಂಗೇಶ್ವರ ಸನಿಧಿಯಲ್ಲಿ 50 ವರ್ಷಗಳ ಸೇವೆ: ಗೀತಾನಂದ ವೇದಿಕೆಯಲ್ಲಿ ಜಿ.ಎಸ್. ಆನಂದ್ ದೇವಾಡಿಗರಿಗೆ ಭಾವಪೂರ್ಣ ಸನ್ಮಾನ

ಕೋಟ: ಹಿರೇ ಮಹಾಲಿಂಗೇಶ್ವರ ಮಿತ್ರವೃಂದದ 50ನೇ ಸುವರ್ಣ ಸಂಭ್ರಮದ ಅಂಗವಾಗಿ, ಸಂಘದ ಗೌರವಾಧ್ಯಕ್ಷರಾದ ಜಿ.ಎಸ್. ಆನಂದ್ ದೇವಾಡಿಗರನ್ನು ಗೀತಾನಂದ ಭವ್ಯ ವೇದಿಕೆಯಲ್ಲಿ ವಿಶೇಷವಾಗಿ ಸನ್ಮಾನಿಸಲಾಯಿತು.

ಹೆಸರಾಂತ ಸಂಗೀತ ನಿರ್ದೇಶಕ ಗುರುಕಿರಣ್ ಹಾಗೂ ಶಮಿತಾ ಮಲ್ನಾಡ್ ತಂಡದ ಸಂಗೀತ ರಸಮಂಜರಿ ಕಾರ್ಯಕ್ರಮದ ಸಂದರ್ಭದಲ್ಲಿ ಈ ಗೌರವ ಪ್ರದಾನ ನಡೆಯಿತು.

ಸನ್ಮಾನ ಸ್ವೀಕರಿಸಿ ಮಾತನಾಡಿದ ಜಿ.ಎಸ್. ಆನಂದ್ ದೇವಾಡಿಗರು ಭಾವನಾತ್ಮಕವಾಗಿ ತಮ್ಮ ಜೀವನ ಪಯಣವನ್ನು ಹಂಚಿಕೊಂಡರು. “ನಾನು ಮೈಕ್‌ನಲ್ಲಿ ಮಾತನಾಡುವವನಲ್ಲ, ಸ್ವಭಾವತಃ ಸಂಕೋಚದ ವ್ಯಕ್ತಿ. ಆದರೆ ಹಿರೇ ಮಹಾಲಿಂಗೇಶ್ವರ ಮಿತ್ರವೃಂದದಲ್ಲಿ ಕಳೆದ 50 ವರ್ಷಗಳ ಸೇವೆ ನನ್ನ ಸಾಧನೆಯಲ್ಲ, ಇದು ಭಕ್ತರ ರೂಪದಲ್ಲಿ ದೇವರು ನೀಡಿದ ಸಹಾಯದ ಫಲ” ಎಂದು ಕೃತಜ್ಞತೆ ವ್ಯಕ್ತಪಡಿಸಿದರು.
ತಾವು 15ನೇ ವಯಸ್ಸಿನಿಂದಲೇ ದೇವಸ್ಥಾನದ ಗಂಟೆ ಬಾರಿಸುತ್ತಾ ದೇವಸೇವೆ ಆರಂಭಿಸಿದ್ದಾಗಿ ಹೇಳಿದ ಅವರು, ದಿನನಿತ್ಯ ದೇವರನ್ನು ಪೂಜಿಸುವ ದೈವಭಕ್ತನಾಗಿದ್ದು, ದೇವರ ಬಳಿ ಸ್ವಾರ್ಥ ಬೇಡಿಕೆ ಇಟ್ಟಿಲ್ಲ ಎಂದು ಮನದಾಳದಿಂದ ಹೇಳಿದರು. ಕೆಲವೊಮ್ಮೆ ಕಾರ್ಯಕ್ರಮಗಳ ಆಯೋಜನೆಯ ಸಂದರ್ಭದಲ್ಲಿ ಸವಾಲುಗಳು ಎದುರಾದರೂ, ಮಿತ್ರರಾದ ಚಂದ್ರ ಆಚಾರಿ ಅವರೊಂದಿಗೆ ಜನರ ಬಳಿ ಧನ ಸಹಾಯಕ್ಕಾಗಿ ತೆರಳಿದಾಗ, ದೇವರೇ ಭಕ್ತರ ರೂಪದಲ್ಲಿ ನೆರವಾಗಿದ್ದಾನೆ ಎಂಬ ನಂಬಿಕೆಯನ್ನು ಅವರು ವ್ಯಕ್ತಪಡಿಸಿದರು.
ದೇವರ ಅನುಗ್ರಹ ಮತ್ತು ಭಕ್ತರ ಸಹಕಾರದಿಂದ ಅನೇಕ ದೇವತಾ ಕಾರ್ಯಗಳನ್ನು ಯಶಸ್ವಿಯಾಗಿ ನಡೆಸಿರುವುದಾಗಿ ತಿಳಿಸಿದ ಜಿ.ಎಸ್. ಆನಂದ್ ದೇವಾಡಿಗರು, ಮುಂದಿನ ದಿನಗಳಲ್ಲಿ ದೇವಸ್ಥಾನದ ಇನ್ನೂ ಹಲವಾರು ಅಭಿವೃದ್ಧಿ ಕಾರ್ಯಗಳು ಪೂರ್ಣಗೊಳ್ಳಲಿ ಎಂದು ಹಿರೇ ಮಹಾಲಿಂಗೇಶ್ವರನಲ್ಲಿ ಪ್ರಾರ್ಥಿಸಿದರು.
ಈ ಸನ್ಮಾನ ಸಮಾರಂಭವು ಭಕ್ತಿ, ಸೇವೆ ಮತ್ತು ನಿಷ್ಠೆಯ ಜೀವಂತ ಸಾಕ್ಷಿಯಾಗಿ ಮೂಡಿಬಂತು.