ಡೈಲಿ ವಾರ್ತೆ: 27/ಜುಲೈ /2024

ಬೆಂಗಳೂರು ಪಿಜಿಯಲ್ಲಿ ಯುವತಿಯ ಹತ್ಯೆ ಪ್ರಕರಣ: ತಲೆಮರೆಸಿಕೊಂಡಿದ್ದ ಆರೋಪಿ ಮಧ್ಯಪ್ರದೇಶದಲ್ಲಿ ಬಂಧನ

ಬೆಂಗಳೂರು: ಕೋರಮಂಗಲದ ಪಿಜಿಯಲ್ಲಿ ಜು.23 ರಂದು ನಡೆದಿದ್ದ ಕೃತಿ ಕುಮಾರಿಯ ಹತ್ಯೆ ಆರೋಪಿ ಅಭಿಷೇಕ್‌ನನ್ನು ಮಧ್ಯಪ್ರದೇಶದಲ್ಲಿ ಪೊಲೀಸರು ಬಂಧಿಸಿದ್ದಾರೆ. ಯುವತಿಯ ಹತ್ಯೆ ಬಳಿಕ ಆರೋಪಿ ಅಭಿಷೇಕ್, ಮಧ್ಯಪ್ರದೇಶಕ್ಕೆ ಹೋಗಿ ತಲೆಮರೆಸಿಕೊಂಡಿದ್ದ.

ಜುಲೈ 23ರ ರಾತ್ರಿ 11ರ ವೇಳೆಗೆ ಪಿಜಿಗೆ ನುಗ್ಗಿದ್ದ ಅಭಿಷೇಕ್, 3ನೇ ಮಹಡಿಯಲ್ಲಿದ್ದ ಕೃತಿ ಕುಮಾರಿಯ ಕೊಠಡಿ ಬಾಗಿಲು ತೆಗೆಯುತ್ತಿದ್ದಂತೆ ಏಕಾಏಕಿ ಮನಸೋ ಇಚ್ಛೆ ಚಾಕುವಿನಿಂದ ಇರಿದು ಹತ್ಯೆ ಮಾಡಿ ಪರಾರಿಯಾಗಿದ್ದ. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ಸಿಸಿಟಿವಿ ದೃಶ್ಯಾವಳಿಗಳನ್ನು ಆಧರಿಸಿ ಆರೋಪಿಯನ್ನು ಗುರುತಿಸಿದ್ದರು. ಪ್ರಕರಣ ಸಂಬಂಧ ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಕೃತಿ ಹತ್ಯೆಗೆ ಕಾರಣವೇನು?
ಮಧ್ಯಪ್ರದೇಶದ ಭೋಪಾಲ್ ಮೂಲದ ಕೊಲೆ ಆರೋಪಿ ಅಭಿಷೇಕ್ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಕೃತಿ ಕುಮಾರಿ ಸ್ನೇಹಿತೆಯನ್ನು ಪ್ರೀತಿಸುತ್ತಿದ್ದ. ಇದೇ ಕಾರಣಕ್ಕೆ ಕೃತಿ ಕುಮಾರಿ ಪಿಜಿಗೆ ಆಗಾಗ ಬಂದು ಹೋಗುತ್ತಿದ್ದ. ಇತ್ತೀಚೆಗೆ ಅಭಿಷೇಕ್ ಮತ್ತು ಸ್ನೇಹಿತೆ ಪ್ರೀತಿಯಲ್ಲಿ ಬಿರುಕು ಮೂಡಿತ್ತು.
ಯಾವುದೇ ಕೆಲಸ ಮಾಡದೆ ಓಡಾಡಿಕೊಂಡಿದ್ದ ಅಭಿಷೇಕ್ ಭೋಪಾಲ್‌ನಿಂದ ಬೆಂಗಳೂರಿಗೆ ಬಂದು ಪ್ರಿಯತಮೆ ಜತೆ ಸುತ್ತಾಡುತ್ತಿದ್ದ. ಎಲ್ಲಾದರೂ ಕೆಲಸಕ್ಕೆ ಸೇರುವಂತೆ ಅಭಿಷೇಕ್‌ಗೆ ಆತನ ಪ್ರಿಯತಮೆ ಬುದ್ದಿ ಹೇಳಿದ್ದಳು. ಪ್ರಿಯತಮೆ ಹೇಳಿದಾಗ ಕೆಲಸಕ್ಕೆ ಸೇರಿದ್ದೇನೆಂದು ಅಭಿಷೇಕ್ ಸುಳ್ಳು ಹೇಳಿದ್ದ, ಈ ವಿಚಾರ ಪ್ರಿಯತಮೆಗೆ ಗೊತ್ತಾಗಿತ್ತು. ಹೀಗಾಗಿ ಆತನ ಪ್ರೇಯಸಿ ಅಭಿಷೇಕ್‌ನನ್ನು ದೂರ ಮಾಡಲು ಪ್ರಯತ್ನಿಸಿದ್ದಳು. ಅಲ್ಲದೇ ಬೇರೆ ಪಿಜಿಗೆ ಆಕೆಯನ್ನು ಸ್ಥಳಾಂತರಿಸಿದ್ದಳು ಇದೇ ಕಾರಣಕ್ಕೆ ಆರೋಪಿ ಕೃತಿಯನ್ನು ಹತ್ಯೆಗೈದಿದ್ದ.