ಡೈಲಿ ವಾರ್ತೆ: ಫೆ./15/2026

ಕುಂದಾಪುರ| ಕೋಡಿಯಲ್ಲಿ ಬೃಹತ್ ರಕ್ತದಾನ ಶಿಬಿರ ಯಶಸ್ವಿ – 26 ಯುನಿಟ್ ರಕ್ತ ಸಂಗ್ರಹ, ಜೀವ ಉಳಿಸುವ ಮಹತ್ಕಾರ್ಯಕ್ಕೆ ಜನರ ಕೈಜೋಡಿಕೆ

ಕುಂದಾಪುರ, ಫೆ.15: ಸಮಾಜಮುಖಿ ಕಾರ್ಯಗಳಲ್ಲಿ ಸದಾ ಮುಂಚೂಣಿಯಲ್ಲಿರುವ ಯಂಗ್ ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್ ಕೋಡಿ, ಕುಂದಾಪುರ ಹಾಗೂ Blood Help Care Karnataka (ರಿ.) ಸಹಭಾಗಿತ್ವದಲ್ಲಿ, KMC Hospital Manipal ರಕ್ತನಿಧಿ ವಿಭಾಗದ ಸಹಯೋಗದೊಂದಿಗೆ ಬೃಹತ್ ಸಾರ್ವಜನಿಕ ರಕ್ತದಾನ ಶಿಬಿರವು ಭಾನುವಾರ ಬೆಳಿಗ್ಗೆ ಕೋಡಿಯ ಯಂಗ್ ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್ ಸೌಹಾರ್ಧ ಭವನದಲ್ಲಿ ಯಶಸ್ವಿಯಾಗಿ ನಡೆಯಿತು.

ಶಿಬಿರವನ್ನು ಉದ್ದೇಶಿಸಿ ಮಾತನಾಡಿದ ಕೋಡಿ ಬ್ಯಾರಿಸ್ ಕಾಲೇಜಿನ ಅಧ್ಯಕ್ಷ ಅಬ್ದುಲ್ ರಹಿಮಾನ್ ಅವರು, “ಯಂಗ್ ಮುಸ್ಲಿಂ ವೆಲ್ಫೇರ್ ಅಸೋಸಿಯೇಶನ್ ವತಿಯಿಂದ ನಡೆಯುವ ಈ ರಕ್ತದಾನ ಶಿಬಿರವು ಸಮಾಜಕ್ಕೆ ಆದರ್ಶಪ್ರಾಯವಾಗಿದೆ. ಒಬ್ಬ ವ್ಯಕ್ತಿಯ ಜೀವವನ್ನು ಉಳಿಸುವುದು ಅಂದರೆ ಸಕಲ ಮಾನವಕುಲದ ಜೀವವನ್ನು ಉಳಿಸಿದಂತೆಯೇ ಮಹತ್ವ ಹೊಂದಿದೆ. ರಕ್ತದಾನವು ಎಲ್ಲಾ ದಾನಗಳಲ್ಲಿ ಶ್ರೇಷ್ಠವಾದ ದಾನ. ಇದು ಮಾನವೀಯತೆ, ಸಹಾನುಭೂತಿ ಹಾಗೂ ಸಹಬಾಳ್ವೆಯ ಪ್ರತೀಕವಾಗಿದೆ” ಎಂದು ಹೇಳಿದರು. ಅಲ್ಲದೆ
“ರಕ್ತದಾನ ಮಾಡುವ ಮೂಲಕ ನಾವು ಅಪರಿಚಿತನ ಜೀವಕ್ಕೆ ಆಶಾಕಿರಣವಾಗುತ್ತೇವೆ. ನಮ್ಮ ಸ್ವಲ್ಪ ಸಮಯ ಮತ್ತು ಸ್ವಲ್ಪ ರಕ್ತ ಮತ್ತೊಬ್ಬರ ಜೀವನದಲ್ಲಿ ದೊಡ್ಡ ಬದಲಾವಣೆ ತರಬಲ್ಲದು. ಆದ್ದರಿಂದ ಆರೋಗ್ಯವಂತ ಪ್ರತಿಯೊಬ್ಬರೂ ರಕ್ತದಾನ ಮಾಡುವ ಸಂಕಲ್ಪ ತಾಳಬೇಕು” ಎಂದು ಕರೆ ನೀಡಿದರು.

ಶಿಬಿರದಲ್ಲಿ ಸಾರ್ವಜನಿಕರಿಂದ ಒಟ್ಟು 26 ಯುನಿಟ್ ರಕ್ತ ಸಂಗ್ರಹಿಸಲಾಯಿತು. ಯುವಕರು ಹಾಗೂ ಸಮಾಜದ ವಿವಿಧ ವರ್ಗಗಳವರು ಉತ್ಸಾಹದಿಂದ ಭಾಗವಹಿಸಿ ಶಿಬಿರದ ಯಶಸ್ಸಿಗೆ ಕೈಜೋಡಿಸಿದರು.

ಈ ಸಂದರ್ಭದಲ್ಲಿ ಅಬ್ದುಲ್ ರಹಿಮಾನ್, ಮೊಹಮ್ಮದಾಲಿ ಕುಂಙಿಮೋನ್, ಬಿ.ಎಸ್.ಎಫ್ ರಫೀಕ್, ರಿಯಾಝ್ ಕೋಡಿ, ಬಿ.ವೈ. ರಿಯಾಝ್, ರವೂಫ್ ಎಂ.ಕೆ, ನಾಸೀರ್, ಜಿ. ಹಸೈನಾರ್ ಹಾಗೂ ಸಮಾಜ ಸೇವಕ ಅಬ್ಬಾಸ್ ಕೋಡಿ ಮೊದಲಾದವರು ಭಾಗಿಯಾಗಿದ್ದರು.

ಸಮಾಜದ ಆರೋಗ್ಯ ಭದ್ರತೆಗೆ ಹಾಗೂ ಜೀವ ಉಳಿಸುವ ಮಹತ್ಕಾರ್ಯಕ್ಕೆ ಯುವಜನತೆ ತೊಡಗಿಸಿಕೊಳ್ಳುತ್ತಿರುವುದು ಶ್ಲಾಘನೀಯ ಎಂದು ಕಾರ್ಯಕ್ರಮದಲ್ಲಿ ಅಭಿಪ್ರಾಯ ವ್ಯಕ್ತವಾಯಿತು.